ಮಂಗಳೂರಿನಲ್ಲಿ ಇತ್ತೀಚೆಗೆ ಪೊಲೀಸರು ಡಿವೈಎಫ್‌ಐ ಮತ್ತು ಸಿಪಿಎಂ ಕಾರ್ಯಕರ್ತರ ಮೇಲೆ ನಡೆಸಿರುವ ಲಾಠಿ ಪ್ರಹಾರವನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲಾಠಿ ಪ್ರಹಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ವಹಿಸಿ ಕೊಂಡಿದ್ದು, ವಿಪರೀತ ನೀರಿನ ದರ ಏರಿಸಿದೆ. ಗೃಹ ಸಚಿವರ ನಾಡಲ್ಲೇ ಇಂತಹ ಪ್ರಕರಣಗಳು ನಡೆದಿದ್ದು ಸರ್ಕಾರಕ್ಕೆ ನಾಚಿಕೆಗೇಡು ಎಂದು ಟೀಕಿಸಿದರು.
ಈ ಹಿಂದೆ ಉಡುಪಿ ಶಾಸಕ ರಘುಪತಿ ಭಟ್ ಪದ್ಮಪ್ರಿಯಾ ಸಾವಿನ ಪ್ರಕರಣದ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ. ಅಂತೆಯೇ ಈಗ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ನಾಯಕ ವಿ.ಎಸ್. ಉಗ್ರಪ್ಪ, ಈ ಬಗ್ಗೆ ಶೀಘ್ರವೇ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ನ್ಯಾಯಯುತ ಹೋರಾಟಕ್ಕೆ ಮನ್ನಣೆ ನೀಡುವ ಬದಲು ಪೊಲೀಸರು ಲಾಠಿಪ್ರಹಾರ ನಡೆಸಿರುವುದು ಅಮಾನವೀಯ ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ 2 ತಿಂಗಳ ಅವಧಿಯಲ್ಲಿ ಲಾಠಿ ಸಂಸ್ಕೃತಿ ಪದೇ ಪದೇ ಮರುಕಳಿಸುತ್ತಿರುವುದು ಸರ್ಕಾರದ ಆಡಳಿತ ವೈಖರಿಯನ್ನು ಎತ್ತಿ ತೋರಿಸುತ್ತಿದೆ ಎಂದು ಟೀಕಿಸಿದರು.
|