ಜೆ.ಸಿ.ನಗರ ಮತ್ತು ಹೆಬ್ಬಾಳದಲ್ಲಿ ಇತ್ತೀಚೆಗೆ ಮಸೀದಿಯಲ್ಲಿ, ಹಂದಿ ಎಸೆದ ಪ್ರಕರಣದಲ್ಲಿ ಶ್ರೀರಾಮಸೇನಾ ಸಂಘಟನೆಯ ಯಾವುದೇ ಪಾತ್ರವಿಲ್ಲ ಎಂದು ಶ್ರೀರಾಮ ಸೇನಾ ಮಾರ್ಗದರ್ಶಕರಾದ ಪ್ರಮೋದ್ ಮುತಾಲಿಕ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಪರಾಧಿ ಕಾರ್ಯಕರ್ತರನ್ನು ಬಂಧಿಸಿ, ಅಮಾನುಷವಾಗಿ ದೈಹಿಕ-ಮಾನಸಿಕ ಹಿಂಸೆ ನೀಡಲು ಇವರೇನು ಭಯೋತ್ಪಾದಕರೇ? ಈ ಅಚಾತುರ್ಯಕ್ಕೆ ಡಿಸಿಪಿ ಉಲ್ಫತ್ ಹುಸೇನರೇ ನೇರ ಹೊಣೆಗಾರರು. ಇವರ ಹಿಂದೂ ವಿರೋಧಿ ನಿಲುವೇ ಇದೆಲ್ಲಕ್ಕೂ ಮೂಲ ಕಾರಣ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ಕರ್ನಾಟಕವನ್ನೇ ತಲ್ಲಣಗೊಳಿಸಿದ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ದಿಕ್ಕು ತಪ್ಪಿಸಲು ಈ ಮತೀಯ ಗಲಭೆಯನ್ನು ಹುಟ್ಟುಹಾಕಿದ್ದಾರೆ. ಆದರೆ ಪ್ರಕರಣ ನಡೆದದ್ದು ಬೆಳಗಿನ ಜಾವ 3 ಗಂಟೆಗೆ. ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿದ್ದು ಮಧ್ಯಾಹ್ನ 2 ಗಂಟೆಗೆ. ಎಲ್ಲಾ ತಿಳಿದಿದ್ದರೂ ಕಾನೂನು-ಸುವ್ಯವಸ್ಥೆ ಕಾಪಾಡಲು ಯಾಕೆ ಉಲ್ಫತ್ ಹುಸೇನರು ಮುಂದಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಉಲ್ಫತ್ ಹುಸೇನ್ ಅವರನ್ನು ಅಮಾನತ್ತಿನಲ್ಲಿಟ್ಟು, ತನಿಖೆ ನಡೆಸಬೇಕು. ಅಂತೆಯೇ, ಹಂದಿ ತಲೆ ಮಸೀದಿಯೊಳಗೆ ಎಸೆದು, ವಿವಾದ ಹುಟ್ಟು ಹಾಕಿದ ಮತಾಂಧ ಮುಸ್ಲಿಮ್ ರೌಡಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು. ಪರಿಸ್ಥಿತಿ ಕೈ ಮೀರಿದರೆ, ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೆ, ನಾವು ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
|