ಚತ್ತೀಸ್‌ಗಡದಿಂದ 100 ಮೆಗಾವಾಟ್ ವಿದ್ಯುತ್ ಪಡೆಯುವಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಡೆ ಲೋಡ್ ಶೆಡ್ಡಿಂಗ್ ಮತ್ತೆ ಜಾರಿಗೆ ಬಂದಿದೆ.
ಅಲ್ಲದೆ, ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ.
ಈ ಸಂಬಂಧ ಬೆಂಗಳೂರು ಬಿಟ್ಟು ಉಳಿದ ನಗರಗಳಲ್ಲಿ ಪ್ರತಿದಿನ 6 ಗಂಟೆ ಕಾಲ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 13 ಗಂಟೆ ವಿದ್ಯುತ್ ಕಡಿತಗೊಳಿಸಿದರೆ, 5 ಗಂಟೆ ಕಾಲ ಪಂಪ್‌ಸೆಟ್‌ಗಳಿಗೆ ಮೂರು ಫೇಸ್ ವಿದ್ಯುತ್ ನೀಡಲಾಗುವುದು. ಅಂತೆಯೆ ಬೆಂಗಳೂರು ನಗರದಲ್ಲಿ ದಿನದಲ್ಲಿ 2 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಚತ್ತೀಸ್‌ಗಡ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಡೆದ ಒಪ್ಪಂದದಂತೆ ರಾಜ್ಯಕ್ಕೆ 100 ಮೆಗಾವಾಟ್ ವಿದ್ಯುತ್ ಪೂರೈಕೆಯಾಗಬೇಕಿತ್ತು. ಆದರೆ ಚತ್ತೀಸ್‌ಗಡವು ಒಂದು ಯೂನಿಟ್‌ಗೆ 10 ರೂ. ದರ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಖರೀದಿ ಒಪ್ಪಂದ ಇನ್ನು ಅಂತಿಮಗೊಂಡಿಲ್ಲ ಎನ್ನಲಾಗಿದೆ.
ಈ ಮೊದಲು ಅಧಿವೇಶನದಲ್ಲಿ ಅಗಸ್ಟ್ ಒಂದರಿಂದ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಸರ್ಕಾರ ಘೋಷಿಸಿದ ಒಂದು ವಾರದಲ್ಲಿ ಮತ್ತೆ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ.
|