ಗಣಿ ಗಲಭೆಗೆ ಸಂಬಂಧಿಸಿದಂತೆ ಬಂಧಿಸಿರುವ ಚಿಕ್ಕನಾಯಕನಹಳ್ಳಿಯ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕನ್ನಡ ಚಳವಳಿ ನಾಯಕ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ಗಣಿ ಧಣಿಗಳಿಗೆ ಮಣೆ ಹಾಕಿ ರೈತರನ್ನು ಗೂಂಡಾ ರೀತಿ ಬಿಂಬಿಸಿ ಬಂಧಿಸಿರುವುದು ಸೂಕ್ತವಲ್ಲ ಎಂದು ಕಿಡಿಕಾರಿದರು.
ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ 65 ಸಾವಿರ ಎಕರೆಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅಲ್ಲದೆ, ಇದರಿಂದ ಲಕ್ಷಾಂತರ ಮಂದಿ ರೈತರಿಗೆ ತೊಂದರೆಯಾಗಿದೆ. ಆದರೆ ಚಿಕ್ಕನಾಯಕನಹಳ್ಳಿಯಲ್ಲಿ ಅಮಾಯಕ ರೈತರನ್ನು ಬಂಧಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಚಕಾರವೆತ್ತದಿರುವುದು ವಿಷಾದನೀಯ ಎಂದರು.
ಈ ಜಿಲ್ಲೆಯಲ್ಲಿ ಗಣಿಗಾರಿಕೆ ಆರಂಭಿಸಿದರೆ ವ್ಯವಸಾಯವೇ ಮೂಲ ಕಸುಬಾಗಿರುವ ರೈತರಿಗೆ ಅನ್ಯಾಯವಾಗುತ್ತದೆ. ಫಲವತ್ತಾದ ಭೂಮಿ ನಾಶವಾಗುತ್ತಿದೆ. ಅಂತರ್ಜಲ ಕಡಿಮೆ ಯಾಗಿ ನೀರಿಗಾಗಿ ಪರಿತಪಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಂಧಿಸಿರುವ ರೈತರನ್ನು ಪೊಲೀಸರು ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದರು.
|