ಬಜೆಟ್‌ನಲ್ಲಿ ಪ್ರಕಟಿಸಲಾಗಿರುವ ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ಮುಂದಿನ ತಿಂಗಳ 9ರಂದು ಬಿಜೆಪಿ ಸರ್ಕಾರಕ್ಕೆ 100 ದಿನಗಳನ್ನು ಪೂರೈಸಲಿದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ತಿಳಿಸಲಾಗಿರುವ ಯೋಜನೆಗಳನ್ನು ನಿಗದಿತ ದಿನದೊಳಗಾಗಿ ಪೂರ್ಣಗೊಳಿಸಬೇಕೆಂದು ಆದೇಶ ನೀಡಿದ್ದಾರೆ.
ಬಜೆಟ್‌ನಲ್ಲಿ ಪ್ರಕಟಿಸಲಾದ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ಕೊರತೆ ಇಲ್ಲ. ಸಾಕಷ್ಟು ಹಣವನ್ನು ಮೀಸಲಿಟ್ಟು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ ಅವರು, ಅವುಗಳ ಸಮರ್ಪಕ ಜಾರಿಗೆ ಎಲ್ಲರೂ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಮುಖ್ಯವಾಗಿ ರೈತರು, ಕೃಷಿ ಕಾರ್ಮಿಕರು, ಬಡವರು ಮತ್ತಿತರ ವರ್ಗಗಳ ಉದ್ಧಾರಕ್ಕಾಗಿ ರೂಪಿಸಿರುವ ಯೋಜನೆಗಳ ಫಲ ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಇದುವೇ ಸರ್ಕಾರದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
|