ಬೆಂಗಳೂರು:ಅರಣ್ಯ ಸೇರಿದಂತೆ ಪ್ರಾಕೃತಿಕ ಸಂಪನ್ಮೂಲ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಗಣಿಗಾರಿಕೆ ಮೇಲೆ ಹಿಡಿತ ಹೊಂದಿರುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ಹೈಕೋರ್ಟ್ ನ್ಯಾಯಾಧೀಶರಾದ ಡಿ.ವಿ. ಶೈಲೇಂದ್ರ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದ್ದು, ಈ ಹಿಂದೆ ಅಂದರೆ 2003ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ವಜಾಗೊಳಿಸಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಿರುವ ರಾಜ್ಯ ಹೈಕೋರ್ಟ್, ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆದೇಶ ಹೊರಡಿಸಿದೆ.
ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲವೊಂದು ಮಾರ್ಗಸೂಚಿಯನ್ನು ಆದೇಶದಲ್ಲಿ ತಿಳಿಸಿದೆ. ಗಣಿಗಾರಿಕೆಗೆ ಅನುಮತಿ ನೀಡುವ ಮುನ್ನ ಅರಣ್ಯ ಪ್ರದೇಶ ಯಾವುದು ಎಂಬ ಬಗ್ಗೆ ಸ್ಪಷ್ಟಪಡಿಸಬೇಕು. ಗಣಿಗಾರಿಕೆಯಿಂದ ಆಗಬಹುದಾದ ಪ್ರಾಕೃತಿಕ ಅಸಮತೋಲನ ನಿವಾರಿಸಲು ಸೂಕ್ತ ಗಮನ ಹರಿಸಬೇಕು ಎಂಬ ಬಗ್ಗೆ ಹೈಕೋಟ್ ಎಚ್ಚರಿಕೆ ನೀಡಿದೆ.
|