ಪಶ್ಚಿಮ ಘಟ್ಟ ಭಾಗದ ನಕ್ಸಲ್ ಚಳವಳಿಯ ಪ್ರಮುಖ ನಾಯಕ ಬಿ.ಜಿ.ಕೃಷ್ಣಮೂರ್ತಿ ಸೇರಿದಂತೆ ಮೂರು ಮಂದಿ ನಕ್ಸಲೀಯರನ್ನು ಬುಧವಾರ ಶಿವಮೊಗ್ಗ ಪೊಲೀಸರು ಬಂಧಿಸಿರುವುದಾಗಿ ದಟ್ಟ ವದಂತಿ ಹಬ್ಬಿದೆ.
ಶಿವಮೊಗ್ಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲ್ ನಾಯಕ ಬಿ.ಜಿ ಸೇರಿದಂತೆ ಮೂರು ಮಂದಿಯನ್ನು ಸೆರೆ ಹಿಡಿದು ರಹಸ್ಯ ತಾಣದಲ್ಲಿ ತನಿಖೆಗೊಳಪಡಿಸಲಾಗುತ್ತಿದೆ ಎಂದು ವದಂತಿ ಕೇಳಿ ಬರುತ್ತಿದೆ.
ಇತ್ತೀಚೆಗಷ್ಟೇ ಪೊಲೀಸ್ ಬಂಧನಕ್ಕೊಳಗಾದ ಶಂಕಿತ ನಕ್ಸಲ್ ಕೋರಂಪೇಟೆ ಕೃಷ್ಣ ಬಿ.ಜಿ ಹಾಗೂ ಆತನ ಸಹಚರರ ಕುರಿತು ನೀಡಿದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಶೃಂಗೇರಿಯ ಕೆರೆಕಟ್ಟೆ ಬಳಿ ಕೃಷಿಕ ಸತೀಶ್ ಅವರ ಮನೆಗೆ ಬಿ.ಜಿ. ಕೃಷ್ಣಮೂರ್ತಿ ನೇತೃತ್ವದ 12ಮಂದಿಯ ನಕ್ಸಲ್ ತಂಡ ದಾಳಿ ನಡೆಸಿ 27ಸಾವಿರ ನಗದು, ಒಂದು ಬಂದೂಕು, ಎರಡು ಮೊಬೈಲ್‌ಗಳನ್ನು ಇತ್ತೀಚೆಗೆ ಅಪಹರಿಸಿತ್ತು.
ಅಲ್ಲದೇ ಆಗುಂಬೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ವೊಂದನ್ನು ಜಖಂಗೊಳಿಸಿದ್ದರು. ಹೀಗೆ ಉಡುಪಿ, ಶಿವಮೊಗ್ಗ ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ ಬಿ.ಜಿ ನೇತೃತ್ವದ ನಕ್ಸಲ್ ತಂಡ ಹಲವಾರು ಕೃತ್ಯಗಳನ್ನು ಎಸಗಿರುವ ಆರೋಪ ಬಿ.ಜಿ,ಕೆ ಮೇಲಿದೆ.
|