ನಗರದ ಚೋಳರಪಾಳ್ಯದ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಗನ್ ತೋರಿಸಿ ಆರು ವರ್ಷದ ಬಾಲಕನೊಬ್ಬನನ್ನು ಅಪಹರಿಸಿದ್ದು,ಕೇವಲ ಅರ್ಧ ಗಂಟೆಯೊಳಗೆ ಅಪಹರಣ ಪ್ರಕರಣವನ್ನು ಪೊಲೀಸರು ಸುಖಾಂತ್ಯಗೊಳಿಸಿದ ಘಟನೆ ಬುಧವಾರ ನಡೆದಿದೆ.
ಬಾಲಕನನ್ನು ಅಪಹರಿಸಿದ ಅರ್ಧ ಗಂಟೆಯೊಳಗಾಗಿ ಜ್ಞಾನಭಾರತಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆ ಮೂಲಕ ಶ್ರವಣ್ (6ವ)ನನ್ನು ಬಿಡುಗಡೆಗೊಳಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ. ಬಾಲಕ ಸುರಕ್ಷಿತವಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಮಂದಿ ಅಪಹರಣಕಾರರು ಮನೆಯೊಳಗೆ ನುಗ್ಗಿ ಶ್ರವಣ್‌ನನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ದಿದ್ದರು, ಈ ಸಂದರ್ಭದಲ್ಲಿ ಶ್ರವಣ್ ಕಿರುಚಾಡುತ್ತಿದ್ದನ್ನು ಕೇಳಿಸಿಕೊಂಡ ಸಾರ್ವಜನಿಕರು ಕಾರ್ ನಂಬರ್ ಸಹಿತ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರರನ್ನು ಪತ್ತೆ ಹಚ್ಚಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಆದರೆ ಅವರು ಯಾಕಾಗಿ ಅಪಹರಿಸಿದರು, ಹಣಕ್ಕಾಗಿಯೋ ಅಥವಾ ಬೇರೆನೋ ಕಾರಣ ಇದೆಯೋ ಎಂಬುದನ್ನು ತನಿಖೆ ನಂತರ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|