ರಾಜ್ಯದಲ್ಲಿ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಕೊನೆಗೂ ನ್ಯೂ ಲೈಫ್ ಪ್ರತಿಕ್ರಿಯೆ ನೀಡಿದ್ದು, ನಮಗೆ ಭಜರಂಗದಳ ಅಥವಾ ಇನ್ಯಾವುದೋ ಅದರ ಸಂಘನೆಗಳ ಹೆದರಿಕೆಯಲ್ಲ. ಬದಲಿಗೆ ಮುಖ್ಯಮಂತ್ರಿಗಳದ್ದೇ ಹೆದರಿಕೆ. ಅವರಿಂದಾಗಿ ನಾವಿಲ್ಲಿ ವಾಸಿಸುವುದೇ ಕಷ್ಟವಾಗಿದೆ ಎಂದು ನ್ಯೂ ಲೈಫ್ ಫೆಲೋಶಿಪ್ ಟ್ರಸ್ಟಿ ವಿ.ಎಂ.ಸ್ಯಾಮುಯೆಲ್ ಆರೋಪಿಸಿದ್ದಾರೆ.
ಸಂಸದ ಸಾಂಗ್ಲಿಯಾನಾ ಜೊತೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಭಜರಂಗದಳ ಆರೋಪಿಸಿರುವ ಸತ್ಯದರ್ಶಿನಿ ಎಂಬ ಪುಸ್ತಕವನ್ನು ನೋಡಿಯೇ ಇಲ್ಲ. ಕಳೆದ 25 ವರ್ಷಗಳಿಂದ ಸಂಘಟನೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಇದುವರೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಬಲವಂತದ ಮತಾಂತರದಲ್ಲಿ ನಮಗೆ ನಂಬಿಕೆ ಇಲ್ಲ ಎಂದರು.
ಈಗ ನಮಗೆ ಕರ್ನಾಟಕದಲ್ಲಿ ವಾಸ್ತವ್ಯ ಮಾಡುವುದೇ ಅಪಾಯಕಾರಿ ಎಂದೆನಿಸಿದೆ. ಅನಗತ್ಯವಾಗಿ ಮುಗ್ಧ ಕ್ರೈಸ್ತರ ಮೇಲೆ ದಾಳಿ ನಡೆದಿದೆ. ಸರ್ಕಾರ ಕೂಡಾ ಕ್ರೈಸ್ತರಿಗೆ ಸೂಕ್ತ ಭದ್ರತೆ ನೀಡುವ ಬದಲು ಮತಾಂತರವನ್ನು ಆಕ್ಷೇಪಿಸುತ್ತಾ ಕಾಲ ಕಳೆಯುತ್ತಿದೆ. ಮುಖ್ಯಮಂತ್ರಿಗಳು ಸತತವಾಗಿ ನ್ಯೂ ಲೈಫ್ ಸಂಘಟನೆ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಅವರ ಆರೋಪಗಳಿಗೆ ಹುರುಳಿಲ್ಲ. ನಮ್ಮ ಜೀವಕ್ಕೆ ಬೆದರಿಕೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
|