ಮೈಸೂರಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಶಾಸಕರಿಗಾಗಿ ಸೆ.23 ರಿಂದ 25ರವರೆಗೆ ಚಿಂತನ ಶಿಬಿರ ನಡೆಯಲಿದೆ. ಶಿಬಿರದಲ್ಲಿ ವೈಚಾರಿಕ ಪ್ರಜ್ಞೆಯ ಸಾಹಿತ್ಯ-ಸಮಾಜ-, ಜೀವನ ಮೌಲ್ಯಗಳು, ಜನಪ್ರತಿನಿಧ್ಯತ್ವದ ಮಹತ್ವಗಳನ್ನು ಬೋಧಿಸಲಾಗುತ್ತದೆ ಎಂದು ಶಿಬಿರದ ಸಂಚಾಲಕ ಗೊ.ರು.ಚನ್ನಬಸಪ್ಪ ಹೇಳಿದರು.
ಸುತ್ತೂರು ಕ್ಷೇತ್ರದ ಶ್ರೀ ಸಿದ್ಧನಂಜ ದೇಶಿಕೇಂದ್ರ ಮಂಗಳ ಮಂಟಪದಲ್ಲಿ ನಡೆಯಲಿರುವ ಶಿಬಿರದಲ್ಲಿ 102 ಶಾಸಕರು ಪಾಲ್ಗೊಳ್ಳುವುದಾಗಿ ಈಗಾಗಲೇ ತಿಳಿಸಿದ್ದಾರೆ. ಶಿಬಿರದಲ್ಲಿ ಕ್ಷೇತ್ರ ತಜ್ಞರು ನೀಡಿದ ಉಪನ್ಯಾಸ ಸೇರಿದಂತೆ ಕಲಾಪಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸುವ ಆಲೋಚನೆಯನ್ನು ಕೂಡಾ ಹೊಂದಿದೆ.
ಶಿಬಿರವನ್ನು ಕೊಯಮತ್ತೂರಿನ ಈಶ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಶಿಬಿರ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಿಬಿರದ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿಕಟ್ಟೆ ಅಧ್ಯಕ್ಷತೆ ವಹಿಸಲಿದ್ದು, ಸಮಾರೋಪ ಭಾಷಣವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಲಿದ್ದಾರೆ. ಅತಿಥಿಯಾಗಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ.
|