ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮರಳು ಲಾರಿ ಮಾಲೀಕರು ಶನಿವಾರ ರಾತ್ರಿಯಿಂದ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರಕ್ಕೂ ಕಾಲಿಟ್ಟಿದೆ.
ಇದರಿಂದ ನಗರದ ಕಟ್ಟಡ ಕಾಮಗಾರಿ ಮಾಡಲು ತೊಂದರೆ ಉಂಟಾಗಿದೆ. ಸಾರಿಗೆ ಸಚಿವರೊಂದಿಗೆ ನಡೆದ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಮುಷ್ಕರ ಮತ್ತಷ್ಟು ತೀವ್ರತೆ ಪಡೆದುಕೊಂಡಿತು.
ಸುಮಾರು 15 ಸಾವಿರ ಲಾರಿಗಳು ಸೇರಿದಂತೆ ಇತರ ಸಣ್ಣ ವಾಹನಗಳು ಕೂಡಾ ಕಟ್ಟಡ ಕಾಮಗಾರಿಯ ಸಾಮಗ್ರಿ ಸಾಗಿಸುವುದನ್ನು ಸ್ಥಗಿತಗೊಳಿಸಿವೆ. ಮರಳು ಗಣಿಗಾರಿಕೆಯನ್ನು ಸಕ್ರಮಗೊಳಿಸಬೇಕೆಂದು ಕೋರಿ ಈ ಮುಷ್ಕರ ನಡೆಸಲಾಗುತ್ತಿದೆ.
ಮುಷ್ಕರ ಮೂರನೇ ದಿನವಾದ ಸೋಮವಾರ ಮುಂದುವರಿದಿದ್ದು, ಗುತ್ತಿಗೆದಾರರು ಕಟ್ಟಡ ಕಾಮಗಾರಿ ತರಲು ವಾಹನಗಳಿಗಾಗಿ ಪರದಾಡುತ್ತಿದ್ದಾರೆ. ತಮ್ಮ ಬೇಡಿಕೆಗೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸುವವರೆಗೆ ಮುಷ್ಕರ ಮುಂದುವರಿಸುತ್ತೇವೆ ಎಂದು ಲಾರಿ ಮಾಲಿಕರ ಒಕ್ಕೂಟದ ಅಧ್ಯಕ್ಷ ಷಣ್ಮಗಪ್ಪ ಹೇಳಿದ್ದಾರೆ.
ನಾವು ಈಗ ಪೊಲೀಸರಿಗೆ ಹಣಕೊಟ್ಟು ಮರಳು ಸಾಗಿಸಬೇಕಾದ ಸ್ಥಿತಿ ಎದುರಾಗಿದೆ ಆದರೆ ಸರ್ಕಾರಕ್ಕೆ 50 ಲಕ್ಷ ರಾಜಸ್ವ (ರಾಯಲ್ಟಿ) ನೀಡಲು ಸಿದ್ಧವಿದ್ದೇವೆ. ಆದರೆ ಸರ್ಕಾರ ಮುಂದೆ ಬಂದು ಮರಳು ಸಾಗಾಣಿಕೆಯನ್ನು ಸಕ್ರಮಗೊಳಿಸಬೇಕು ಎಂದರು.
|