ರಾಜ್ಯದ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಭಜರಂಗ ದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್‌ಗೆ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಆದರೆ ಅವರನ್ನು ಜೈಲಿನಿಂದ ಇನ್ನೂ ಬಿಡುಗಡೆಗೊಳಿಸಿಲ್ಲ. ಮತ್ತೈದು ದಿನಗಳ ಕಾಲ ಜೈಲಿನಲ್ಲಿರುವ ಸಾಧ್ಯತೆ ಇರುವುದಾಗಿ ಕುಮಾರ್ ವಕೀಲರು ತಿಳಿಸಿದ್ದಾರೆ.
ಮಂಗಳೂರು ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೆ.ಎಸ್.ವಿಜಯ್ ಅವರು ಭಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್‌ಗೆ ಜಾಮೀನು ನೀಡಿ,ಹತ್ತು ಸಾವಿರ ರೂಪಾಯಿ ಬಾಂಡ್‌ನ ವೈಯಕ್ತಿಕ ಭದ್ರತೆ ನೀಡುವಂತೆ ಆದೇಸಿದ್ದರು. ಏತನ್ಮಧ್ಯೆ ಜಾಮೀನು ಆದೇಶವನ್ನು ಜೈಲಿನ ಅಧಿಕಾರಿಗಳಿಗೆ ನೀಡಿದರೂ ಕೂಡ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಕುಮಾರ್ ಅವರ ಬಿಡುಗಡೆಗೆ ವಿಳಂಬನೀತಿ ಅನುಸರಿಸಲಾಗುತ್ತಿದೆ ಎಂದು ಭಜರಂಗದಳ ಕೆಂಡಕಾರಿದೆ.
ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗೆ ತಿಂಗಳ ಮೊದಲ ಮತ್ತು 15ನೇ ತಾರೀಕಿನಂದು ಹಾಜರಾಗುವಂತೆ ನ್ಯಾಯಾಲಯ ಈ ಸಂದರ್ಭದಲ್ಲಿ ಮಹೇಂದ್ರ ಕುಮಾರ್‌ಗೆ ಸೂಚನೆ ನೀಡಿದೆ.
ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಹಿನ್ನೆಲೆಯಲ್ಲಿ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರನ್ನು ಸೆಪ್ಟೆಂಬರ್ 19ರಂದು ಬಂಧಿಸಿದ್ದು,ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ,ಅ.1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಶನಿವಾರದಂದು ಮಂಗಳೂರಿನ ಸೆಶನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ವಿಚಾರಣೆಯ ವಿಚಾರಣೆ ನಡೆಸಿ, ಅದನ್ನು ಸೋಮವಾರಕ್ಕೆ ಮುಂದೂಡಿತ್ತು.
|