ಉತ್ತರ ಕನ್ನಡದ ಐತಿಹಾಸಿಕ ಗೋಕರ್ಣ ದೇವಾಲಯವನ್ನು ರಾಮಚಂದ್ರಾ ಮಠಕ್ಕೆ ಹಸ್ತಾಂತರಿಸಿ ಭಾರಿ ವಿರೋಧ ಎದುರಿಸುತ್ತಿರುವ ಸರ್ಕಾರ ಈಗ ಮತ್ತೊಂದು ವಿವಾದಕ್ಕೆ ಸಿಕ್ಕಿಹಾಕಿಕೊಂಡಿದೆ.
ಗೋಕರ್ಣ ದೇವಾಲಯದ ಚರಾಸ್ತಿಯನ್ನು ರಾಮಚಂದ್ರಾಪುರ ಮಠದ ಶ್ರೀಗಳಿಗೆ ಹಸ್ತಾಂತರಿಸಿರುವ ದಾಖಲೆಗಳನ್ನು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್. ಬಂಗಾರಪ್ಪ ಬಹಿರಂಗಗೊಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಆಸ್ತಿಯನ್ನು ನೀಡಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ ಬೆನ್ನಲ್ಲೆ ರಾಘವೇಶ್ವರ ಶ್ರೀಗಳಿಗೆ ನೋಂದಾವಣಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಮಣ್ಣೆರೆಚುವ ಕೆಲಸ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರ ನಡೆಸುತ್ತಿರುವ ತಪ್ಪನ್ನು ಸರಿಪಡಿಸಿಕೊಂಡು ಕೂಡಲೇ ರಾಮಚಂದ್ರಾಪುರ ಮಠಕ್ಕೆ ಒಪ್ಪಿಸಿರುವ ಗೋಕರ್ಣ ದೇವಾಲಯವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಮಾಜವಾದಿ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದ ಅವರು, ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
|