ಮರಳು ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಮಂಗಳವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದಾಗಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಅಲ್ಲದೆ, ನಗರ ಸೇರಿದಂತೆ ಬಹುತೇಕ ಕಡೆ ಕಟ್ಟಡ ನಿರ್ಮಾಣ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಆದರೆ ಲಾರಿ ಮಾಲೀಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಕೆಲ ಲಾರಿಗಳು ರಸ್ತೆಗಿಳಿದಿದ್ದು, ಮುಷ್ಕರದ ಬಿಸಿ ಸ್ವಲ್ಪ ತಣ್ಣಗಾಗಿದೆ.
ಈ ನಡುವೆ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದರೂ, ಸರ್ಕಾರ ಮಾತುಕತೆಗೆ ಒಲವು ತೋರಿಸಿಲ್ಲ. ಒಂದು ವೇಳೆ ಲಾರಿ ಮಾಲೀಕರ ಬೇಡಿಕೆಗೆ ಸ್ಪಂದಿಸದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ.
ಆದರೆ ಮುಷ್ಕರದಿಂದಾಗಿ ಲಕ್ಷಾಂತರ ಕೂಲಿ ಕಾರ್ಮಿಕರ ಜೀವನೋಪಾಯ ಗಂಭೀರ ಸ್ವರೂಪವನ್ನು ತಾಳಿದ್ದು, ಹಸಿವಿನಿಂದ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದೇ ವೇಳೆ ವಾಣಿಜ್ಯ ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯ ಅಳವಡಿಕೆಯನ್ನು ವಿರೋಧಿಸಿ ಲಾರಿ ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ಇದೇ ತಿಂಗಳ 30ರಿಂದ ಮುಷ್ಕರ ನಡೆಸಲಿದೆ ಎಂದು ಕರ್ನಾಟಕ ಲಾರಿ ಮಾಲೀಕರ ಒಕ್ಕೂಟ ನಿರ್ಧರಿಸಿದೆ.
|