ಸರ್ಕಾರದ ಮಧ್ಯಪ್ರವೇಶದಿಂದಾಗಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮರಳು ಲಾರಿ ಮುಷ್ಕರ ಮಂಗಳವಾರ ರಾತ್ರಿ ಅಂತ್ಯಗೊಂಡಿದೆ.
ಮಂಗಳವಾರ ರಾತ್ರಿ ಸಾರಿಗೆ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಮರಳು ಮತ್ತಿತರ ಕಟ್ಟಡ ಸಾಮಗ್ರಿ ಸಾಗಾಣಿಕೆದಾರರು ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಕಳೆದ 9 ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅಲ್ಲದೆ, ಪ್ರತಿ ಲೋಡ್ ಮರಳಿಗೆ 250 ರೂ. ರಾಜಧನವನ್ನು ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೋಕ್, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರೆಂಬುದು ಮರಳು ಲಾರಿ ಮಾಲೀಕರ ಪ್ರಮುಖ ಸಮಸ್ಯೆಯಾಗಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.
ಏತನ್ಮಧ್ಯೆ, ವಾಣಿಜ್ಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವುದರ ವಿರುದ್ಧ ಸೆ. 30ರಂದು ಮುಷ್ಕರಕ್ಕೆ ಲಾರಿ ಮಾಲೀಕರು ಸಜ್ಜಾಗಿದ್ದರು. ಇದಕ್ಕೂ ಮೊದಲು ಸರ್ಕಾರದ ಈ ನಿರ್ಣಯದ ಕುರಿತು ಮಾತುಕತೆ ನಡೆಸಲು ಸೆ. 29ರಂದು ಕೇಂದ್ರ ಭೂ ಸಾರಿಗೆ ಸಚಿವ ಟಿ. ಆರ್. ಬಾಲು ಅವರನ್ನು ಭೇಟಿ ಮಾಡಲು ಲಾರಿ ಮಾಲೀಕರು ಅವಕಾಶ ಕೋರಿದ್ದಾರೆ ಎಂದು ತಿಳಿದು ಬಂದಿದೆ.
|