ಲೈವ್ ಬ್ಯಾಂಡ್ ಸೇರಿದಂತೆ ಬಾರ್, ಪಬ್‌ಗಳಲ್ಲಿ ಮದಿರೆಯನ್ನು ಸರಬರಾಜು ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಬುಧವಾರದಂದು ಮಹತ್ವದ ತೀರ್ಪು ನೀಡುವ ಮೂಲಕ, ಮಹಿಳೆಯರಿಗೂ ಸಮಾನ ಸ್ಥಾನಮಾನ ದೊರೆಯಬೇಕು ಎಂಬ ಬೇಡಿಕೆಯನ್ನು ಎತ್ತಿ ಹಿಡಿದಿದೆ.
ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಯಮ20(2)ರ ಅನ್ವಯ ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡದಂತೆ ನಿಷೇಧ ಹೇರುವುದು ಸಂವಿಧಾನ ಬಾಹಿರ ಎಂದು ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು , ಯಾವುದೇ ಷರತ್ತುಗಳಿಲ್ಲದೆ ಮಹಿಳೆಯರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಆದೇಶ ನೀಡಿದ್ದಾರೆ.
ಅಬಕಾರಿ ಕಾಯ್ದೆಯನ್ವಯ ಮಹಿಳೆಯರು ಬಾರ್‌ಗಳಲ್ಲಿ ಕಾರ್ಯನಿರ್ವಹಿಸುವುದಕ್ಕೆ ರಾಜ್ಯ ಸರ್ಕಾರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಲೈವ್ ಬ್ಯಾಂಡ್ ಅಸೋಸಿಯೇಶನ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಆ ನಿಟ್ಟಿನಲ್ಲಿ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್, ಕಳೆದ ವರ್ಷ ಸರ್ವೊಚ್ಚನ್ಯಾಯಾಲಯ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ತೀರ್ಪು ನೀಡಿ, ಯಾವ ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಅವಕಾಶ ನೀಡಲಾಗುತ್ತದೋ, ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸೂಚಿಸಿದರು.
ಅಂತೂ ಈ ತೀರ್ಪಿನಿಂದ ಪಾನ ಪ್ರಿಯರು ಇನ್ನು ಮುಂದೆ ಮದ್ಯದ ಮತ್ತಿನೊಂದಿಗೆ ಮಾನಿನಿಯರತ್ತ ಕುಡಿನೋಟ ಬೀರುತ್ತ ಮತ್ತಷ್ಟು ಮತ್ತೇರಿಸಿಕೊಳ್ಳಬಹುದಾಗಿದೆ!
|