ರಾಜ್ಯ ಸರ್ಕಾರ ಪ್ರತಿಪಕ್ಷ ನಾಯಕರುಗಳ ಚಲನ ವಲನಗಳ ಮೇಲೆ ಕಣ್ಗಾವಲು ನಡೆಸುವ ಮೂಲಕ ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಪ್ತಚರ ಇಲಾಖೆಯು ತಮ್ಮ ಚಲನವಲನಗಳ ಮೇಲೆ ಗಮನವಿಟ್ಟಿದ್ದು, ದೂರವಾಣಿ ಸಂಭಾಷಣೆ ಕದ್ದಾಲಿಕೆ ಮಾಡುತ್ತಿರುವ ಮೂಲಕ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.
ಅಲ್ಲದೆ, ವಿರೋಧ ಪಕ್ಷಗಳ ನಾಯಕರುಗಳ ದೂರವಾಣಿಯನ್ನು ಟ್ಯಾಪಿಂಗ್ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಚರ್ಚ್‌ಗಳ ಮೇಲಿನ ದಾಳಿ ಕುರಿತು ಮಾತನಾಡಿದ ಉಗ್ರಪ್ಪ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಇಲ್ಲವೇ, ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಅವರು ತಿಳಿಸಿದರು.
ಈ ಕುರಿತು ನಿವೃತ್ತ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ನೇತೃತ್ವದ ಏಕಸದಸ್ಯ ಆಯೋಗಕ್ಕೆ ವಹಿಸಿರುವ ಮಾರ್ಗಸೂಚಿಗಳನ್ನು ಗಮನಿಸಿದರೆ ಗೋದ್ರಾ ಹತ್ಯಾಕಾಂಡವನ್ನು ಮುಚ್ಚಿ ಹಾಕಿದಂತೆ ಈ ಘಟನೆಯನ್ನು ಮುಚ್ಚಿ ಹಾಕುವ ಹುನ್ನಾರವಿದೆ ಎಂದು ತಿಳಿಸಿದ ಅವರು, ಈ ತನಿಖೆಯನ್ನು ಪಕ್ಷಾತೀತವಾಗಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
|