ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷಗಾದಿ ಹುದ್ದೆ ನನಗೆ ಸಿಗದಿರುವ ಬಗ್ಗೆ ನನ್ನ ಬೆಂಬಲಿಗರಲ್ಲಿ ಅಸಮಾಧಾನ ಮೂಡಿರುವುದು ಸಹಜ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ತಿಳಿಸಿದ್ದಾರೆ.
ತಮ್ಮ ನಿವಾಸಕ್ಕೆ ಕೆಪಿಸಿಸಿ ನೂತನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತ ತಿಳಿಸಿದರು.
ಬೆಂಬಲಿಗರನ್ನು ಸಮಾಧಾನಗೊಳಿಸಲು ಯತ್ನಿಸಿದ್ದೇನೆ. ನನ್ನನ್ನು ನಂಬಿ ಪಕ್ಷಕ್ಕೆ ಬಂದಿದ್ದ ಅವರೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಪಕ್ಷದ ವರಿಷ್ಠರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ತೀವ್ರ ಆಕಾಂಕ್ಷಿಯಾಗಿರಲಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ್ ಚವಾಣ್ ಅವರೇ ಅಧ್ಯಕ್ಷ ಸ್ಥಾನ ಕೊಟ್ಟರೆ ವಹಿಸಿಕೊಳ್ಳುತ್ತೀರಾ ಎಂದು ನನ್ನನ್ನು ಕೇಳಿದ್ದರು. ಜವಾಬ್ದಾರಿ ಕೊಟ್ಟರ ನಿರ್ವಹಿಸುವೆ ಎಂದು ಹೇಳಿದ್ದೆ ಎಂದು ತಿಳಿಸಿದರು.
ಕಾಂಗ್ರೆಸ್ ತೊರೆಯುವ ಪ್ರಶ್ನೆ ನನ್ನ ಮುಂದಿಲ್ಲ ಎಂದು ಹೇಳಿದ ಅವರು,ಅಹಿಂದ ಸಮಾವೇಶಗಳಲ್ಲಿ ಹಿಂದೆಯೂ ಭಾಗವಹಿಸಿದ್ದೆ. ಮುಂದೆಯೂ ಭಾಗವಹಿಸುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
|