ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಸೋಮವಾರ ಬೆಳಿಗ್ಗೆ ಇಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮಂಗಳವಾರ ಬೆಳಿಗ್ಗೆ ಅಧಿಕೃತ ಚಾಲನೆ ದೊರೆಯಲಿದ್ದು, ದಸರಾ ಸಂದರ್ಭದಲ್ಲಿ ಶಾಂತಿ ಕದಡುವ ಉದ್ದೇಶದ ಹೊಂದಿದ್ದ ಇಬ್ಬರು ಉಗ್ರರನ್ನು ಇಂದು ಬೆಳಿಗ್ಗೆ ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅನಧಿಕೃತ ಮೂಲದ ಪ್ರಕಾರ ಆರು ಮಂದಿ ಉಗ್ರರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಕೂಡ, ಇಬ್ಬರು ಶಂಕಿತರನ್ನು ಸೆರೆ ಹಿಡಿದಿರುವುದನ್ನು ಖಚಿತಪಡಿಸಿರುವ ಇಲಾಖೆ, ಬಂಧಿತರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ವಿವರಿಸಿದ್ದಾರೆ.
ದಸರಾ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಮೈಸೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಉಗ್ರರನ್ನು ಬಂಧಿಸಿದ್ದು,ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಪ್ರಸಿದ್ಧ ಮೈಸೂರು ಅರಮನೆಯನ್ನು ಸ್ಫೋಟಿಸುವುದಾಗಿ ಉಗ್ರರಿಂದ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದ್ದಾರೆ. |
|