ಉಗ್ರರ ಕರಿನೆರಳಿನ ಆತಂಕದ ನಡುವೆಯೇ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ಸಾಂಸ್ಕೃತಿಕ ನಗರಿ ನವವಧುವಿನಂತೆ ಸಿಂಗಾರಕೊಂಡಿದೆ.
ಕನ್ನಡಿಗರ ನಾಡಹಬ್ಬಕ್ಕೆ ಮಂಗಳವಾರ ಬೆಳಿಗ್ಗೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿ ಅವರು ಚಾಮುಂಡಿಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಭಾಗವಹಿಸಲಿದ್ದಾರೆಂದು ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ನಾಳೆಯಿಂದ ಆರಂಭಗೊಳ್ಳಲಿರುವ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಮೈಸೂರಿನಲ್ಲಿ ಜಮಾಯಿಸಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ,ಕುಸ್ತಿ ಪಂದ್ಯಗಳಿಗೆ ಮಂಗಳವಾರ ಚಾಲನೆ ದೊರೆಯಲಿದೆ.
ಮೈಸೂರು ಅರಮನೆ ವಿದ್ಯುದ್ದೀಪಗಳಿಂದ ಅಲಂಕಾರಗೊಂಡಿದ್ದು, ಲಕ್ಷಾಂತರ ಪ್ರವಾಸಿಗರ ಕಣ್ಣನ ಸೆಳೆಯುತ್ತಿದೆ.ನಾಡಹಬ್ಬಕ್ಕಾಗಿ ಮೈಸೂರಿನ ಬೀದಿ, ಬೀದಿ ತಳಿರು-ತೋರಣಗಳಿಂದ ಶೃಂಗಾರಗೊಂಡಿದೆ.
ದಸರಾಕ್ಕೆ ಉಗ್ರರ ಕರಿನೆರಳು: ನಾಡಹಬ್ಬ ಆರಂಭಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಇಂದು ಮೈಸೂರಿನಲ್ಲಿ ಶಂಕಿತ ಇಬ್ಬರು ಉಗ್ರರನ್ನು ಬಂಧಿಸಲಾಗಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬಂಧಿತರು ಅಜೀಮ್ ನಗರದ ನಿವಾಸಿಗಳೆಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದು, ದಸರಾ ಮಹೋತ್ಸವದಲ್ಲಿ ಸ್ಫೋಟ ಕೃತ್ಯ ನಡೆಸಿ ಶಾಂತಿ ಕದಡುವ ಸಂಚು ರೂಪಿಸಿದ್ದ ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ಜಿಲ್ಲೆಯ ಜನರು ಯಾರೇ ಅನುಮಾನಿತ ವ್ಯಕ್ತಿಗಳು,ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಬಿಗಿ ಬಂದೋಬಸ್ತ್-ಎಲ್ಲೆಡೆ ಕ್ಯಾಮರಾ ಕಣ್ಣು:
ಮೈಸೂರು ಅರಮನೆಗೆ ಸ್ಫೋಟ ಬೆದರಿಕೆಯ ಹಿನ್ನೆಲೆಯಲ್ಲಿ ಸುಮಾರು 2ಕೋಟಿ ಅರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಹೈದರಾಬಾದ್‌ನಿಂದ ಭದ್ರತಾ ವ್ಯವಸ್ಥೆಗಾಗಿ ಕಂಟ್ರೋಲ್ ರೂಂ ನಿರ್ಮಿಸಿರುವುದಾಗಿ ಸಚಿವ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಸುಮಾರು 15ಸಿಸಿ ಟಿವಿ, ಮುಖ್ಯದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ, ಈ ಕಂಟ್ರೋಲ್ ರೂಂ 24ಗಂಟೆಯೂ ಕಾರ್ಯಾಚರಿಸುತ್ತಿರುವುದಾಗಿ ತಿಳಿಸಿದ ಅವರು, ಅರಮನೆಯೊಳಗೆ ಬರುವ ಹಾಗೂ ವಾಹನಗಳ ಸೇರಿದಂತೆ ಪ್ರತಿಯೊಂದು ಚಲನ-ವಲನಗಳು ಇದರಲ್ಲಿ ದಾಖಲಾಗುವುದು ಎಂದು ವಿವರಿಸಿದರು. ಅಲ್ಲದೇ ಅರಮನೆ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿರುವುದಾಗಿ ಹೇಳಿದರು. |
|