ಗಣಿಗಾರಿಕೆಯ ವಿವಾದ-ದ್ವೇಷ ಮುಂದುವರಿದಿರುವ ಹಿನ್ನೆಲೆಯಲ್ಲಿ, ಇದೀಗ ಫೋರ್ಕ್ ಲೈನ್ ಕದ್ದ ಆರೋಪದ ಮೇಲೆ ರಾಜ್ಯ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ವಿರುದ್ಧ ದೂರು ದಾಖಲಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿಯ ಐರನ್ ವೋರ್ ಕಂಪೆನಿಯ ಮಾಲಿಕ ಟಪಾಲ್ ಚಂದ್ರಶೇಖರ್ ಎಂಬವರು, ರೆಡ್ಡಿಯವರ ಮೇಲೆ ಕಳವು ಆರೋಪದ ವಿರುದ್ಧ ತೋರಣಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿನ ಗಣಿಧಣಿಗಳ ನಡುವೆ ವೈಷಮ್ಯ ಹೊತ್ತಿ ಉರಿಯುತ್ತಿದ್ದು,ಒಬ್ಬರನ್ನೊಬ್ಬರು ಹತ್ತಿಕ್ಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂಬುದಾಗಿ ಇತ್ತೀಚೆಗಷ್ಟೇ ಮಾಜಿ ಸಚಿವ ದಿವಾಕರ ಬಾಬು ಆರೋಪಿಸಿದ್ದರು. ಅಲ್ಲದೇ ಸಚಿವ ರೆಡ್ಡಿಯವರು ವ್ಯವಸ್ಥಿತವಾಗಿ ರಾಜ್ಯದ ಭೂಮಿಯನ್ನು ನೆರೆಯ ಆಂಧ್ರಕ್ಕೆ ಅಕ್ರಮವಾಗಿ ನೀಡಿದ್ದಾರೆ ಎಂದು ದೂರಿದ್ದರು.
ಏತನ್ಮಧ್ಯೆ ಭಾನುವಾರ ಮಾಜಿ ಸಚಿವ ದಿವಾಕರ ಬಾಬು ಅವರನ್ನು ಬಂಧಿಸಲಾಗಿತ್ತು.ಬಾಬು ಅವರು ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೇ,ಮತ್ತೊಬ್ಬ ಗಣಿ ಮಾಲೀಕ ಟಪಾಲು ಚಂದ್ರಶೇಖರ್ ಜನಾರ್ದನ ರೆಡ್ಡಿಯವರ ವಿರುದ್ಧವೇ ಕಳ್ಳತನ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. |
|