ಮುಂಬರುವ ವಿಧಾನಸಭೆ ಉಪಚುನಾವಣೆ, ಲೋಕಸಭೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬೆಳೆಸಲು ಸಿದ್ಧತೆ ಮಾಡಿಕೊಂಡಿದೆ.
ಶತ್ರುಗಳ ಶತ್ರು ಮಿತ್ರ ಎಂಬಂತೆ ರಾಜ್ಯದಲ್ಲಿ ಬಿಜೆಪಿ ಮಣಿಸಲು ಪಣತೊಟ್ಟಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿ ಮಟ್ಟಹಾಕಲು ಚಿಂತನೆ ನಡೆಸಿದೆ.
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ದೇಶಪಾಂಡೆ, ಜಾತ್ಯತೀತ ಪಕ್ಷಗಳ ಒಗ್ಗೂಡುವಿಕೆ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರವೇ ಜಾತ್ಯತೀತ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂಬ ಹೇಳಿಕೆ ಪುಷ್ಠಿ ನೀಡಿದೆ.
ಅಲ್ಲದೆ, ದೇವೇಗೌಡರ ಜೊತೆ 20 ನಿಮಿಷಗಳ ಕಾಲ ದೂರವಾಣಿ ಮುಖೇನ ಮಾತುಕತೆ ನಡೆಸಿರುವ ದೇಶಪಾಂಡೆ ಮೈತ್ರಿ ಕುರಿತು ಚರ್ಚೆ ನಡೆಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಆರ್. ವಿ. ದೇಶಪಾಂಡೆ ಮೂಲತಃ ಜೆಡಿಎಸ್ ನವರು. ಈ ಹಿನ್ನೆಲೆಯಲ್ಲಿ ಮೈತ್ರಿ ಬಹುತೇಕ ಖಚಿತ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಹಾಗೆಯೇ, ಜೆಡಿಎಸ್ ಜತೆ ಮೃದು ಧೋರಣೆ ಹೊಂದಿರುವ ಕಾರಣಕ್ಕಾಗಿಯೇ ಹೈಕಮಾಂಡ್ ಅಧ್ಯಕ್ಷ ಸ್ಥಾನವನ್ನು ದೇಶಪಾಂಡೆ ಅವರಿಗೆ ನೀಡಿದ್ದು, ಮೈತ್ರಿ ಮಾತುಕತೆಗೆ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೆ, ಮೈತ್ರಿಯಿಂದ ಮುಂದಿನ ಲೋಕಸಭಾ ಚುನಾವಣೆಗೆ ಇದು ಸಹಕಾರಿಯಾಗಬಹುದೆಂಬ ದೃಷ್ಟಿಯಿಂದ ಕಾಂಗ್ರೆಸ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗೆ ಜೆಡಿಎಸ್ ಮೈತ್ರಿಗೆ ಮುಂದಾಗಿದ್ದರೂ, ರಾಜ್ಯದಲ್ಲಿ ಜೆಡಿಎಸ್ ಕಳೆಗುಂದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಅನಿವಾರ್ಯ ಎಂಬುದು ಜೆಡಿಎಸ್ ಮನಗಂಡಿರುವ ಸತ್ಯ.
ಈ ನಿಟ್ಟಿನಲ್ಲಿ ರಾಜಕೀಯ ಲೆಕ್ಕಚಾರದಲ್ಲಿ ತೊಡಗಿರುವ ದೇವೇಗೌಡರು, ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಜೆಡಿಎಸ್ ಬಾಗಿಲು ಮುಚ್ಚಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಮೈತ್ರಿ ಸಾಧ್ಯತೆಯನ್ನು ಬಲಗೊಳಿಸಿದ್ದಾರೆ.
ಒಟ್ಟಿನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಮುಂದಾಗಿ ಉಪಚುನಾವಣೆಯಲ್ಲಿ ಯಶ ಕಂಡರೇ ಅದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂಬುದು ರಾಜಕೀಯ ಪಂಡಿತರ ಅಂಬೋಣ. |
|