ಅನಗತ್ಯವಾಗಿ ನೂತನ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಬೊಕ್ಕಸ ಬರಿದಾಗಿಸುವ ಕೆಲಸದಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೂರಿದ್ದಾರೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ನಂಜುಂಡಪ್ಪ ಸಮಿತಿ ನೀಡಿರುವ ಶಿಫಾರಸುಗಳ ಪರಿಣಾಮಕಾರಿ ಜಾರಿಗೆ ಉನ್ನತಾಧಿಕಾರ ಸಮಿತಿ ರಚಿಸುವ ನಿರ್ಧಾರದ ಔಚಿತ್ಯವನ್ನು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನಿಸಿದರು.
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಇರುವಾಗ ಮತ್ತೆ ಇಂತಹ ಸಮಿತಿ ಅಗತ್ಯ ಏನಿದೆ ಎಂದು ಪ್ರಶ್ನಿಸಿದ ಅವರು,ಈ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ ನೀಡಲಾಗುವುದಂತೆ. ಅನಗತ್ಯ ವೆಚ್ಚಕ್ಕೆ ಕಾರಣವಾಗುವ ಇಂತಹ ನಿರ್ಧಾರಗಳೇ ಬಿಜೆಪಿಯ ಇದುವರೆಗಿನ ಸಾಧನೆ ಎಂದು ಆಪಾದಿಸಿದರು.
ಅಡ್ವೋಕೇಟ್ ಜನರಲ್ ಹಾಗೂ ಕಾನೂನು ಕಾರ್ಯದರ್ಶಿ ಇರುವಾಗ ವಕೀಲರೊಬ್ಬರನ್ನು ಮುಖ್ಯಮಂತ್ರಿ ಅವರ ಸಲಹೆಗಾರರಾಗಿ ನೇಮಿಸಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದೆ.
ಅದೇ ರೀತಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಇರುತ್ತಾರೆ. ಅವರೊಂದಿಗೆ ಈಗ ಮಾಧ್ಯಮ ಸಲಹೆಗಾರರು ಅಂತ ಒಬ್ಬರನ್ನು ನೇಮಿಸಿ ಅವರಿಗೂ ಸಚಿವರ ಸ್ಥಾನಮಾನ ನೀಡಲಾಗಿದೆ.ಇದೆಲ್ಲ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿದೆ ಎಂದರು. |
|