ವೇಗ ನಿಯಂತ್ರಕ ಅಳವಡಿಕೆಯನ್ನು ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ಲಾರಿ ಮುಷ್ಕರ ಆರಂಭಿಸುವುದಾಗಿ ಲಾರಿ ಮಾಲಿಕರ ಸಂಘ ತಿಳಿಸಿದೆ.
ಉದ್ದೇಶಿತ ಲಾರಿ ಮುಷ್ಕರ ತಪ್ಪಿಸಲು ಸರ್ಕಾರ ತೀವ್ರ ಪ್ರಯತ್ನ ನಡೆಸಿದ್ದು, ವೇಗ ನಿಯಂತ್ರಕ ಅಳವಡಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂಬ ಹಿಂದಿನ ಆದೇಶದ ಮರು ಪರಿಶೀಲನೆಗಾಗಿ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿದೆ.
ವೇಗ ನಿಯಂತ್ರಕ ಅಳವಡಿಕೆ ಆದೇಶ ವಾಪಸ್ ಪಡೆಯಬೇಕೆಂದು ಪಟ್ಟು ಹಿಡಿದಿರುವ ಲಾರಿ ಮಾಲೀಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಪರಿಣಾಮ ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ 7,06,385 ವಾಣಿಜ್ಯ ವಾಹನಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ.
ಈ ನಡುವೆ ವೇಗ ನಿಯಂತ್ರಕ ಕಡ್ಡಾಯಗೊಳಿಸಬೇಕೆಂಬ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಲಾರಿ ಮಾಲೀಕರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಬುಧವಾರ ವಿಚಾರಣೆಗೆ ಬರಲಿದ್ದು, ವಿವಾದ ಇತ್ಯರ್ಥವಾಗುವ ಆಶಾಭಾವನೆಯನ್ನು ಲಾರಿ ಮಾಲೀಕರು ಹೊಂದಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಕೈ ಬಿಡುವಂತೆ ಸಾರಿಗೆ ಸಚಿವ ಅಶೋಕ್ ಲಾರಿ ಮಾಲೀಕರನ್ನು ಕೋರಿದ್ದಾರೆ. |
|