ವಿದ್ಯುತ್ ಬಳಕೆಯ ಬೇಡಿಕೆಯ ಗರಿಷ್ಟ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಲೋಡ್ ಶೆಡ್ಡಿಂಗ್ ಮಾಡಬೇಕಾದ ಅನಿವಾರ್ಯತೆ ಇರುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ 2 ಗಂಟೆ, ಗ್ರಾಮೀಣ ಪ್ರದೇಶಗಳಲ್ಲಿ 6 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲು ನಿರ್ಧರಿಸಲಾಗಿದೆ ಎಂದರು. ಆದರೆ ಇದು ಯಾವಾಗಿನಿಂದ ಜಾರಿ ಎಂಬ ಕುರಿತು ಖಚಿತವಾಗಿ ತಿಳಿಸಿಲ್ಲ.
ಪ್ರತಿದಿನ ವಿದ್ಯುತ್ ಬಳಕೆ 116ದಶಲಕ್ಷ ಯೂನಿಟ್‌ಗೆ ತಲುಪುತ್ತಿದೆ. ಉತ್ಪಾದನೆಯನ್ನು ಮಿತವಾಗಿ ಬಳಸಿ,ಶಾಖೋತ್ಪನ್ನ ವಿದ್ಯುತ್ ಅನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಲಾಗುತ್ತದೆ ಎಂದು ಹೇಳಿದರು.
ರಾಜ್ಯ 1400ಮೆಗಾ ವ್ಯಾಟ್ ವಿದ್ಯುತ್ ಕೊರತೆ ಎದುರಿಸುತ್ತಿದ್ದು ಇದನ್ನು ಬಗೆಹರಿಸಲು ಎಲ್ಲಾ ಖಾಸಗಿ ಕೇಂದ್ರದಿಂದ ಖರೀದಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಈಗಾಗಲೇ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಮೂಲ ಸೌಲಭ್ಯದ ಸಮಸ್ಯೆ ಇಲ್ಲ ಎಂದು ಈಶ್ವರಪ್ಪ ಹೇಳಿದರು. |
|