ಚರ್ಚ್, ಪ್ರಾರ್ಥನಾ ಮಂದಿರ, ದೇವಾಲಯಗಳ ಮೇಲಿನ ದಾಳಿ ಒಂದೆಡೆಯಾದರೆ, ಮತ್ತೊಂದೆಡೆ ಗಾಂಧಿ ಜಯಂತಿ, ರಂಜಾನ್ , ದೀಪಾವಳಿ ಹಬ್ಬ ಆಚರಿಸಲ್ಪಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರಿಗೆ ಬಿಡುವಿಲ್ಲದ (ನಿದ್ರಾರಹಿತ) ಕಾರ್ಯದಲ್ಲಿ ತೊಡಗಿದ್ದಾರೆ.
ಈಗಾಗಲೇ ನಗರದಾದ್ಯಂತ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ ಎಂ.ಆರ್. ಪೂಜಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಎಲ್ಲಾ ಚರ್ಚ್‌ಗಳಿಗೂ ಬಿಗಿ ಬಂದೋಬಸ್ತ್ ನೀಡಲಾಗಿದ್ದು,ಅತಿ ಸೂಕ್ಷ್ಮ ಪ್ರದೇಶಗಳಾದ ಶಿವಾಜಿನಗರ, ಕೆ.ಆರ್.ಮಾರ್ಕೆಟ್, ಡಿಜೆ ಹಳ್ಳಿ,ಕೆಜಿ ಹಳ್ಳಿ, ಜೆಜೆ ನಗರ, ಗುರುವಪ್ಪನಪಾಳ್ಯ, ಯಾರಾಬ್ ನಗರ್, ಲಾಲ್‌ಬಹದ್ದೂರ್ ಶಾಸ್ತ್ರೀನಗರ್ ಸೇರಿದಂತೆ ನಗರದ ವಿವಿಧೆಡೆ ಪೂರ್ಣಪ್ರಮಾಣದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದರು.
ನಗರ ಪೊಲೀಸರು,ಕೇಂದ್ರ ಪಡೆ ಸೇರಿದಂತೆ ಆರು ಸಾವಿರ ಮಂದಿಯನ್ನು ನಿಯೋಜಿಸಲಾಗಿದೆ. ಶೀಘ್ರ ಪ್ರಹಾರ ದಳದ (ಆರ್‌ಎಎಫ್) ಒಂದು ಕಂಪೆನಿ ಕೂಡ (150ಮಂದಿ)ಯನ್ನೂ ಕೂಡ ನಿಯೋಜಿಸಲಾಗಿದೆ ಎಂದು ಪೂಜಾರ್ ಹೇಳಿದರು.
ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಶಾಂತಿಪಾಲನಾ ಸಮಿತಿಯ ಸಭೆ ಕರೆದು,ಎಲ್ಲೆಡೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸೂಚನೆ ನೀಡಿರುವುದಾಗಿ ತಿಳಿಸಿದ್ದು, ಎಲ್ಲಾ ಸಮುದಾಯದವರು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ. |
|