ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು: 4 ಇಂಡಿಯನ್ ಮುಜಾಹಿದೀನ್ ಉಗ್ರರ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು: 4 ಇಂಡಿಯನ್ ಮುಜಾಹಿದೀನ್ ಉಗ್ರರ ಸೆರೆ
5 ಸಜೀವ ಬಾಂಬ್, 11 ಲಕ್ಷ ರೂ., ಕಂಪ್ಯೂಟರ್, ಡೈರಿ, ಸಿಡಿ ವಶ: ಮೂವರು ಕಸ್ಟಡಿಗೆ
ಮಂಗಳೂರು ಪರಿಸರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ್ದರೆನ್ನಲಾದ ನಾಲ್ಕು ಮಂದಿಯನ್ನು ಬಂಧಿಸಿರುವ ಪೊಲೀಸರು, ಅವರಿಂದ 5 ಸಜೀವ ಬಾಂಬ್, 11 ಲಕ್ಷ ರೂ. ನಗದು, ಬೈಕ್, ಮೊಬೈಲ್, ಸಿಮ್ ಕಾರ್ಡ್‌ಗಳು, ಕಂಪ್ಯೂಟರ್‌ಗಳು ಮತ್ತಿತರ ಸಾಮಗ್ರಿಗಳನ್ನು ಶುಕ್ರವಾರ ನಸುಕಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ.

ಇದರೊಂದಿಗೆ ಕರಾವಳಿಯಲ್ಲಿ ಭಾರೀ ವಿಧ್ವಂಸಕ ಕೃತ್ಯವೊಂದು ತಪ್ಪಿದಂತಾಗಿದ್ದು, ಇತ್ತೀಚೆಗೆ ದೇಶಾದ್ಯಂತ ನಡೆದಿರುವ ಸರಣಿ ಬಾಂಬ್ ಸ್ಫೋಟಗಳಲ್ಲಿ ಇವರ ಕೈವಾಡವಿರುವ ಕುರಿತು ತೀವ್ರ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಳ್ಳಾಲ ಮುಕ್ಕಚ್ಚೇರಿಯ ರಿಯಲ್ ಎಸ್ಟೇಟ್ ಏಜೆಂಟ್ ಮಹಮ್ಮದಾಲಿ (56), ಆತನ ಮಗ, ಉಳ್ಳಾಲ ಕುರಾನಿಕ್ ಅಧ್ಯಯನ ವಿದ್ಯಾರ್ಥಿ ಜಾವೇದಾಲಿ (20), ಸುಭಾಷ್ ನಗರದ ನೌಶಾದ್ (25) ಹಾಗೂ ಹಳೆಯಂಗಡಿಯ ಅಹ್ಮದ್ ಬಾವ (33) ಎಂಬವರು ಬಂಧಿತ ಉಗ್ರರು.

ಇವರೆಲ್ಲರೂ ಸ್ಥಳೀಯರೇ ಆಗಿದ್ದು, ಅವರು ನೀಡಿದ ಮಾಹಿತಿಯ ಅನುಸಾರ, ನಿಷೇಧಿತ ಸಿಮಿ ಸಂಘಟನೆಯ ಪ್ರಮುಖ ವ್ಯಕ್ತಿಯಾಗಿದ್ದ ಅಹ್ಮದ್ ಆಲಿಯಾಸ್ ರಿಯಾಜ್ ಭಟ್ಕಳ ಎಂಬಾತನ ಮಂಗಳೂರಿನ ಮನೆಗೆ ದಾಳಿ ನಡೆಸಲಾಯಿತು. ಅಲ್ಲಿಂದ ಐದು ಸಜೀವ ಬಾಂಬ್‌ಗಳು, 12 ಮೊಬೈಲ್ ಹ್ಯಾಂಡ್‌ಸೆಟ್‌ಗಳು, ಹಲವಾರು ಸಿಮ್ ಕಾರ್ಡ್‌ಗಳು, ಜಿಹಾದಿ ಸಾಹಿತ್ಯ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಯಿತು. ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ರಿಯಾಜ್ ಮತ್ತು ಆತನ ಸಹಚರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರಗಾಮಿಗಳು ಕರಾವಳಿಗೆ ನುಸುಳಿದ್ದು, ಕೆಲವೇ ದಿನಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲಿದ್ದಾರೆ ಎಂಬ ಬಗ್ಗೆ ಕೆಲವು ದಿನಗಳಿಂದ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು, ಐಜಿಪಿ ನೇತೃತ್ವದಲ್ಲಿ ಗುರುವಾರ ರಾತ್ರಿ ಸಭೆ ಸೇರಿ ಕಾರ್ಯಾಚರಣೆ ತಂತ್ರ ರೂಪಿಸಿದ್ದರು. ಇದರಲ್ಲಿ ಮುಂಬೈ ಪೊಲೀಸರು, ನಕ್ಸಲ್ ನಿಗ್ರಹ ದಳ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಈ ಕಾರ್ಯತಂತ್ರದ ಅನುಸಾರ ಬುಲೆಟ್ ಪ್ರೂಫ್ ಜಾಕೆಟ್ ತೊಟ್ಟಿದ್ದ ಸುಮಾರು 150 ಮಂದಿ ಪೊಲೀಸರ ದಂಡು ರಾತೋರಾತ್ರಿ 2 ಗಂಟೆ ಸುಮಾರಿಗೆ ಮಂಗಳೂರು ಸುತ್ತಮುತ್ತ ರೈಡ್ ಮಾಡಿದೆ.

ಉಳ್ಳಾಲದ ಮುಕ್ಕಚ್ಚೇರಿ ಎಂಬಲ್ಲಿ ಮಸೀದಿ ಸಮೀಪದ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು, ಮಹಮ್ಮದಾಲಿ, ಆತನ ಮಗ ಜಾವೇದಾಲಿಯನ್ನು ವಶಕ್ಕೆ ಪಡೆದಿದ್ದರು. ಮಹಮ್ಮದಾಲಿಯ ಮನೆಯಿಂದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸಿಡಿಗಳು, ಜಿಹಾದಿ ಸಾಹಿತ್ಯ, ಇಸ್ಲಾಂ ಧಾರ್ಮಿಕ ಪುಸ್ತಕಗಳು, ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಜಾವೇದ್ ಅಲಿ ನೀಡಿದ ಮಾಹಿತಿಯಂತೆ, ನೌಶಾದ್‌ನನ್ನು ಬಂಧಿಸಲಾಗಿದ್ದು, ಆತನ ಮನೆಯಿಂದ ಪಲ್ಸರ್ ಬೈಕ್, ಎರಡು ಮೊಬೈಲ್ ಹ್ಯಾಂಡ್‌ಸೆಟ್, ಡೈರಿಗಳು ಮತ್ತು ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಅಂತೆಯೇ ನೌಶಾದ್ ವಿಚಾರಣೆ ಸಂದರ್ಭ ದೊರಕಿತ ಮಾಹಿತಿ ಆಧರಿಸಿ ರಿಯಾಜ್ ಭಟ್ಕಳ ಅಲಿಯಾಸ್ ಅಹ್ಮದ್‌ನ ಮಂಗಳೂರು ಮನೆಗೆ ದಾಳಿ ನಡೆಸಲಾಗಿತ್ತು.

ಮಹಮ್ಮದಾಲಿ ಮಂಗಳೂರಿನಲ್ಲಿ ಗುತ್ತಿಗೆದಾರನಾಗಿದ್ದು, 3 ವರ್ಷದ ಹಿಂದೆ ಉಳ್ಳಾಲಕ್ಕೆ ಬಂದಿದ್ದ. ಆತ ಆಸುಪಾಸಿನಲ್ಲಿ ಜನಪ್ರಿಯನೂ ಆಗಿದ್ದ. ನೌಶಾದ್ ನೀಡಿದ ಮಾಹಿತಿ ಆಧರಿಸಿ, ರಿಯಾಜ್‌ನ ಸಹವರ್ತಿ ಮುದಸ್ಸರ್ (24) ಎಂಬಾತನ ಮನೆಗೂ ದಾಳಿ ನಡೆಸಿ ಒಂದು ಲ್ಯಾಪ್‌ಟಾಪ್ ಕಂಪ್ಯೂಟರ್, ಹಾರ್ಡ್ ಡಿಸ್ಕ್, 11.39 ಲಕ್ಷ ರೂ. ನಗದು, ಸಿಮ್ ಕಾರ್ಡ್ ಸಹಿತ 5 ಮೊಬೈಲ್ ಹ್ಯಾಂಡ್‌ಸೆಟ್‌ಗಳು, ಜಿಹಾದಿ ಸಾಹಿತ್ಯ, ಪಾಸ್‌ಪೋರ್ಟ್, ಸಿಡಿ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಯಿತು.

ಇದರೊಂದಿಗೆ ಕರಾವಳಿ ಪ್ರದೇಶದಲ್ಲಿ ಉಗ್ರಗಾಮಿಗಳು ನೆಲೆಯೂರಿರುವ ವದಂತಿಗಳಿಗೆ ಪುಷ್ಟಿ ದೊರೆತಂತಾಗಿದ್ದು, ಕರಾವಳಿ ಜನತೆ ತಲ್ಲಣಗೊಂಡಿದ್ದಾರೆ. ಮಾತ್ರವಲ್ಲ, ಸ್ಥಳೀಯರು ಇಷ್ಟೊಂದು ಆಳವಾಗಿ ಉಗ್ರವಾದಿ ಸಂಘಟನೆ ಜೊತೆ ತಮ್ಮನ್ನು ತೊಡಗಿಸಿಕೊಂಡಿರುವುದು ಜನತೆಯ ಹುಬ್ಬೇರಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು, ಮುಂಬೈ ಪೊಲೀಸರು ಹಾಗೂ ನಕ್ಸಲ್ ನಿಗ್ರಹದಳದ ಜಂಟಿ ಕಾರ್ಯಾಚರಣೆಯಲ್ಲಿ ಈ ಬಂಧನ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ನಾಟಕ ಸಾಹಿತ್ಯ ಪರಿಷತ್ ಉದಯ
ಪ್ರತಿಪಕ್ಷಗಳನ್ನು ಕಾಡುಮೃಗಗಳೆಂದಿಲ್ಲ:ಸಿಎಂ ಸ್ಪಷ್ಟನೆ
ಜೆಲಿಟಿನ್ ಸ್ಫೋಟ:ಇಬ್ಬರಿಗೆ ಗಾಯ
ನಿರ್ದೇಶಕ ಎಸ್.ನಾರಾಯಣ್ ಅರ್ಜಿ ವಜಾ
ಜೆಡಿಎಸ್ ನಿಂದ ಕಲ್ಪನಾ ಸಿದ್ದರಾಜು ಕಣಕ್ಕೆ
ದಸರಾಗೆ ಉಗ್ರರ ಕರಿನೆರಳು