ರಾಜ್ಯದ ವಿವಿಧೆಡೆ ನಡೆದ ಪ್ರಾರ್ಥನಾ ಮಂದಿರ, ಚರ್ಚ್ ಮೇಲಿನ ದಾಳಿಯನ್ನು ನಿಯಂತ್ರಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ವಿರುದ್ಧ ಪ್ರಧಾನಿಗೆ ದೂರು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ನವಿಲೆ ಕೃಷಿ ವಿ.ವಿ.ಯಲ್ಲಿ ಶುಕ್ರವಾರ ಸಾವಯವ ಕೃಷಿ ಸಂಶೋಧನಾ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ ಈಗ ಶಾಂತಿ ನೆಲೆಸಿದೆ. ಇಂತಹ ವಿಷಯದಲ್ಲಿ ಸಚಿವರು ಪ್ರಚೋದನಕಾರಿ ಹೇಳಿಕೆ ನೀಡಿ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ.
ರಾಜ್ಯದಲ್ಲಿ ಎಂದಿಗೂ ಕೋಮು ಸೌಹಾರ್ದತೆ ಕದಡಿಲ್ಲ.ಸಚಿವರ ಈ ಹೇಳಿಕೆ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗುವುದು.ಸಾಧ್ಯವಾದರೆ ನಿಯೋಗ ಕಳುಹಿಸಲಾಗುವುದು ಎಂದರು.
ಚರ್ಚ್ ಮೇಲಿನ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕದವರಲ್ಲದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ವಿಚಾರಣೆ ನಡೆಸಬೇಕೆಂಬ ಆರ್ಚ್ ಬಿಷಪ್ ಡಾ.ಬರ್ನಾಡ್ ಮೋರಸ್ ಅವರ ಬೇಡಿಕೆಯನ್ನು ತಳ್ಳಿಹಾಕಿದ ಯಡಿಯೂರಪ್ಪ, ಸರ್ಕಾರ ಈಗಾಗಲೇ ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ಒಪ್ಪಿಸಿದ್ದರಿಂದ ಈಗ ಚರ್ಚೆ ಅನಗತ್ಯ ಎಂದರು. |