ಬೆಂಗಳೂರು: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಭಾಗ್ಯಲಕ್ಷ್ಮಿ ಮತ್ತು ಸೈಕಲ್ ಯೋಜನೆಗಳ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ತನಿಖೆಗೆ ಅಧಿಕಾರಿಗಳನ್ನು ಮಾತ್ರವಲ್ಲದೆ ಆಗ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನೂ ಒಳಪಡಿಸಿದರೆ ಸೂಕ್ತ ಎಂದು ಅವರು ಹೇಳಿದ್ದಾರೆ. ಈ ಎರಡೂ ಯೋಜನೆಗಳಿಗೆ ಸಂಬಂಧಿಸಿದಂತೆ ಅಂದು ಯಾವುದೇ ಟೆಂಡರ್ ಕರೆಯದೇ ತಮ್ಮಿಚ್ಛೆಯ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿತ್ತು. ಇದನ್ನು ಜೆಡಿಎಸ್ ಸಚಿವರು ವಿರೋಧಿಸಿದ್ದರು. ಆದರೆ ಅದಕ್ಕೆ ಮನ್ನಣೆ ನೀಡದೆ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗಿತ್ತು ಎಂದು ಕುಮಾರಸ್ವಾಮಿ ದೂರಿದರು.
ಕುಮಾರಸ್ವಾಮಿ ಏನು ಮಾಡುತ್ತಿದ್ದರು? ಅಂದು ತಾವೇ ಮುಖ್ಯಮಂತ್ರಿ ಆಗಿದ್ದರಿಂದ ತಡೆಯಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅಂದು ತಮಗೆ ಕೆಲವು ಇತಿಮಿತಿಗಳಿದ್ದವು. ಜೊತೆಗೆ ತಾವು ಗ್ರಾಮವಾಸ್ತ್ಯವ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಹೆಚ್ಚು ಗಮನ ನೀಡಲು ಸಾಧ್ಯವಾಗಲಿಲ್ಲ ಎಂದರು. ಮೇವರಿಕ್ ಹಗರಣಕ್ಕೆ ಸಂಬಂಧಿಸಿದಂತೆ ತಾವು ಮುಖ್ಯಮಂತ್ರಿಗಳ ವಿರುದ್ಧ ನೇರ ಆರೋಪ ಮಾಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. |