ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಲಿಂಗಾಯಿತ ಸಮುದಾಯ ಈಗ ತಿರುಗಿ ಬಿದ್ದಿದೆ.
ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಇನ್ನಿತರ ಲಿಂಗಾಯಿತ ಮಠದ ಸ್ವಾಮೀಜಿಗಳಲ್ಲಿ ಕ್ಷಮಯಾಚಿಸುವವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಲಿಂಗಾಯಿತ ಸಂಘಟನೆಗಳು ತಿಳಿಸಿವೆ.
ಈ ಮಧ್ಯೆ ಚಾಮರಾಜನಗರದಲ್ಲಿ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರು ಶುಕ್ರವಾರ ಪ್ರತಿಭಟನೆ ನಡೆಸಿ, ಚಾಮರಾಜನಗರ ಹಾಗೂ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಕುಮಾರಸ್ವಾಮಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಲಿಂಗಾಯಿತ ಸಮುದಾಯದ ಮಖಂಡರೂ ಖಂಡಿಸಿದ್ದಾರೆ.
ಸ್ವಾಮೀಜಿ ವಿರುದ್ಧ ಮಾತನಾಡಲು ಕುಮಾರಸ್ವಾಮಿಗೆ ಇರುವ ನೈತಿಕ ಹಕ್ಕಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಕಳೆದ ಬಾರಿ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತವಿದ್ದ ಕಾರಣ, ಸ್ವಾಮೀಜಿ ಸರ್ಕಾರದ ಆಹ್ವಾನವನ್ನು ತಿರಸ್ಕರಿಸಿ,ದಸರಾದಿಂದ ದೂರ ಉಳಿದಿದ್ದರು ಎಂದು ಮುಖಂಡರು ಹೇಳಿದ್ದಾರೆ.
ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಖುದ್ದು ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಗೆ ಆಹ್ವಾನ ನೀಡಿದ್ದರು. ಇದಕ್ಕೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದಿದ್ದಾರೆ.
|