ರಾಜ್ಯಕ್ಕೆ ಮಂಜೂರಾಗಿದ್ದ ಅಲ್ಟ್ರಾ ಮೆಗಾ ವಿದ್ಯುತ್ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದ್ದು, ಈ ಮೂಲಕ ತದಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಅನುಷ್ಠಾನಕ್ಕೆ ಪಟ್ಟು ಹಿಡಿದಿದ್ದ ರಾಜ್ಯದ ಕ್ರಮದಿಂದ ಅಸಮಾಧಾನಗೊಂಡಿದ್ದ ಕೇಂದ್ರ ಸರ್ಕಾರ ಈ ಮೂಲಕ ಹೊರಗೆಡವಿದೆ.
ರಾಜ್ಯ ಸರ್ಕಾರ ಬಿಜಾಪುರದ ಕೂಡಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಅಲ್ಟ್ರಾಮೆಗಾ ಪವರ್ ಪ್ರಾಜೆಕ್ಟ್ ಗೆ ಅನುಮತಿ ನಿರಾಕರಿಸಿರುವ ಕುರಿತು ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದ್ದು, ಕೇವಲ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರ ಅಲ್ಟ್ರಾ ಮೆಗಾವ್ಯಾಟ್ ಪವರ್ ಪ್ರಾಜೆಕ್ಟ್ ಮೂಲಕ ಕೂಡಗಿಯಲ್ಲಿ 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ನಿರ್ಧರಿಸಿತ್ತು. ಇದೀಗ ರಾಜ್ಯದ ನಿರ್ಧಾರಕ್ಕೆ ಕೇಂದ್ರ ತಣ್ಣೀರೆರಚಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರ ಸರ್ಕಾರ ಮೂರು ದಿನಗಳ ಹಿಂದಷ್ಟೇ ರಾಜ್ಯಕ್ಕೆ ಪತ್ರ ಬರೆದಿದೆ. ಕೂಡಗಿಯಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದಿದ್ದಾರೆ.
ಅಲ್ಲದೆ, ಅಲ್ಟ್ರಾಮೆಗಾ ವಿದ್ಯುತ್ ಪ್ರಾಜೆಕ್ಟ್ ಗೆ ನಿರಾಕರಿಸಿರುವ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ನಿಯೋಗವೊಂದು ತೆರಳಲಿದೆ ಎಂದು ಅವರು ತಿಳಿಸಿದ್ದಾರೆ. |