ಭಯೋತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ಬಲವಂತದ ಮತಾಂತರ ತಡೆಯುವ ಸೂಕ್ತ ಕಾನೂನುಗಳನ್ನು ರೂಪಿಸಬೇಕೆಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬಲವಂತ ಮತಾಂತರ, ಚರ್ಚ್ ಮೇಲಿನ ದಾಳಿ ಪ್ರಕರಣ, ಭಯೋತ್ಪಾದನೆಯ ಹೆಚ್ಚಳ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ರಾಜ್ಯ ಮಠಾಧೀಶರ ಸಮನ್ವಯ ಸಮಿತಿಯು ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ `ಶಾಂತಿಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲ ಧರ್ಮಗಳೂ ಶಾಂತಿಯನ್ನೇ ಬೋಧಿಸುತ್ತವೆ. ಮತ್ತು ಮತಪ್ರಚಾರಕ್ಕೆ ಅವಕಾಶವಿದೆ. ಆದರೆ ಜನರ ದೌರ್ಬಲ್ಯಗಳನ್ನು ಬಳಸಿಕೊಂಡು ಆಮಿಷವೊಡ್ಡಿ ಅಥವಾ ಬಲವಂತರ ಮತಾಂತರ ಮಾಡುವುದು ಸರಿಯಲ್ಲ. ಅಂತೆಯೇ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸುವುದನ್ನು ನಾವು ಖಂಡಿಸುತ್ತೇವೆ. ಇಂತಹ ಕೃತ್ಯಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ನಾವು ಒತ್ತಾಯಿಸುವುದಾಗಿ ಶ್ರೀಗಳು ತಿಳಿಸಿದರು.
ಅಂತಾರಾಷ್ಟ್ರೀಯ ಪಂಚಶೀಲ ತತ್ವಗಳ ಅನುಸಾರ ಸ್ವಯಂ ಕಡಿವಾಣ ವಿಧಿಸಿಕೊಂಡು ಶಾಂತಿ ಕಾಪಾಡುವುದು ಇಂದಿನ ಪ್ರಥಮ ಆದ್ಯತೆಯಾಗಿದೆ. ದೇಶದಲ್ಲಿ ಶಾಂತಿ ನೆಲೆಸಲು ಎಲ್ಲ ಮಠಾಧೀಶರು ಒಟ್ಟಾಗಿ ಪ್ರಯತ್ನಿಸಬೇಕಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಯಾತ್ರೆಯ ಅಂತಿಮ ಘಟ್ಟದಲ್ಲಿ ವಿಧಾನಸೌಧಕ್ಕೆ ತೆರಳಿದ ಶ್ರೀಗಳು ಸರ್ಕಾರಕ್ಕೆ ಮನವಿ ಅರ್ಪಿಸಿದರು. ಸಚಿವರಾದ ರಾಮಚಂದ್ರೇಗೌಡ ಮತ್ತು ಅಶೋಕ್ ಅವರು ಮನವಿ ಸ್ವೀಕರಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ವಿಭೂತಿಮಠದ ಶ್ರೀಗಳು ಸೇರಿದಂತೆ ಹಲವು ಸಾಧುಸಂತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. |