ಪುರಸಭೆಗೆ ಸೇರಿದ ಬಸ್ಸು ನಿಲ್ದಾಣ ಬಳಿ ಅನಾವರಣಗೊಳಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಇಲ್ಲಿನ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ ಘಟನೆ ನಡೆದಿದೆ.
ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರೀಯ ನಾಯಕರಿಬ್ಬರ ಪ್ರತಿಮೆಯನ್ನು ಅಕ್ಟೋಬರ್ 2 ರಂದು ಅನಾವರಣಗೊಳಿಸಲಾಗಿತ್ತು. ಇಲ್ಲಿನ ಜೆಎಂಎಫ್ ಸಿ ನ್ಯಾಯಾಧೀಶ ಹೊನ್ನಸ್ವಾಮಿ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆದರೆ ಎರಡೇ ದಿನಗಳಲ್ಲಿ ಪುರಸಭೆ ಬಿಜೆಪಿ ಸದಸ್ಯ ಗಿರೀಶ್ ಹಾಗೂ ಅಧ್ಯಕ್ಷೆ ಮಾಯಮ್ಮ ಸಿಬ್ಬಂದಿಯೊಂದಿಗೆ ಬಂದು ಸ್ಥಳೀಯರು ಕಾನೂನು ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಪ್ರತಿಮೆಯನ್ನು ತೆರವುಗೊಳಿಸಿದರು.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರಲ್ಲದೇ, ಕ್ಷುಲಕ ಕಾರಣಕ್ಕಾಗಿ ರಾಷ್ಟ್ರೀಯ ನಾಯಕರಿಗೆ ಅವಮಾನವೆಸಗಿದ್ದಾರೆ ಎಂದು ಆರೋಪಿಸಿದರು. ಈ ನಡುವೆ ಪುರಸಭೆಯ ವರ್ತನೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಅ.7ರಂದು ರಸ್ತೆ ತಡೆ ನಡೆಸಲಿದ್ದಾರೆ.
|