ಮಂಗಳೂರಿನಲ್ಲಿ ಸೆರೆ ಹಿಡಿಯಲಾಗಿರುವ ನಾಲ್ವರು ಶಂಕಿತ ಉಗ್ರರು ಬೆಂಗಳೂರು ಸೇರಿದಂತೆ ದೇಶದ ಹಲವಾರು ಕಡೆ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಪೊಲೀಸ್ ಹಿರಿಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಅಹಮದಾಬಾದ್,ದೆಹಲಿ ಸೇರಿದಂತೆ ಹಲವೆಡೆ ನಡೆದ ಸ್ಫೋಟ ಪ್ರಕರಣಗಳಲ್ಲೂ ಈ ಉಗ್ರಗಾಮಿಗಳು ಕೈವಾಡ ಇದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಕಳೆದ ಶುಕ್ರವಾರ ಮುಂಜಾನೆ ಮುಂಬೈ,ಮಂಗಳೂರು ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಜಂಟಿ ಕಾರ್ಯಾಚರಣೆಯೊಂದಿಗೆ ಈ ನಾಲ್ವರು ಉಗ್ರರನ್ನು ಬಂಧಿಸಲಾಗಿತ್ತು.
ಬಂಧಿತರು ಆಗಾಗ ಪುಣೆಗೆ ಹೋಗಿಬರುತ್ತಿದ್ದರೆನ್ನಲಾಗಿದೆ. ಅಲ್ಲದೇ ದೇಶದ ಪ್ರಮುಖ ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಬಗ್ಗೆ ಪೂರ್ವ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ.
ಕರಾವಳಿ ತೀರದ ಪ್ರಮುಖ ಹಿಂದೂ ದೇವಾಲಯಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು ಅಲ್ಲದೇ, ಆ ಬಗ್ಗೆ ನೀಲನಕ್ಷೆ ತಯಾರಿಸಿ ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಸ್ಫೋಟಿಸುವ ಬಗ್ಗೆ ಯೋಜನೆ ರೂಪಿಸಿದ್ದರು.
ರಿಯಾಜ್ ಭಟ್ಕಳ ಬೆಂಬಲ:
ರಿಯಾಜ್ ಭಟ್ಕಳ ಎಂಬ ಆರೋಪಿ ಬಾಂಬ್ ಸ್ಫೋಟದ ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗಿದೆ. ಈತನೇ ಸರಣಿ ಬಾಂಬ್ ಸ್ಫೋಟಗಳಿಗೆ ಕಾರಣಕರ್ತನನಾಗಿದ್ದು,ಈತನನ್ನು ಬಂಧಿಸಲು ಪೊಲೀಸರು ಈಗಾಗಲೇ ಬಲೆ ಬೀಸಿದ್ದಾರೆ.
ಆದರೆ ರಿಯಾಜ್ ಭಟ್ಕಳ ಇದೀಗ ಎಲ್ಲಿ ಕಣ್ಮರೆಯಾಗಿದ್ದಾನೆಂದು ಇಲಾಖೆಗೂ ತಿಳಿದಿಲ್ಲ,ಕೆಲವು ಮೂಲಗಳ ಪ್ರಕಾರ ರಿಯಾಜ್ ಪಾಕಿಸ್ತಾನಕ್ಕೆ ಪರಾರಿಯಾಗಿರುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ. |