ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ 18ನೇ ಅಧ್ಯಕ್ಷರಾಗಿ ರಘುನಾಥರಾವ್ ವಿಶ್ವನಾಥರಾವ್ ದೇಶಪಾಂಡೆ ಸೋಮವಾರಅಧಿಕಾರ ಸ್ವೀಕರಿಸಲಿದ್ದಾರೆ.
ಈ ಸಂಬಂಧ ಸೋಮವಾರ ದೊಡ್ಡಬಳ್ಳಾಪುರದ ಭಗತ್ ಸಿಂಗ್ ಮೈದಾನದಲ್ಲಿ ಅದ್ದೂರಿ ಸಮಾರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು 300 ಮಂದಿ ಒಟ್ಟಿಗೆ ಕೂರಬಹುದಾದಷ್ಟು ದೊಡ್ಡದಾದ ವೇದಿಕೆ ನಿರ್ಮಿಸಲಾಗಿದೆ.
ಅಲ್ಲದೆ, 50 ಸಾವಿರಕ್ಕೂ ಹೆಚ್ಚು ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ವೇಳೆ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ.
ಸಮಾರಂಭಕ್ಕೆ ರಾಜ್ಯ ಉಸ್ತುವಾರಿ ಪೃಥ್ವಿರಾಜ್ ಚವಾಣ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
ಸಂಜೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶಪಾಂಡೆ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಈ ನಡುವೆ ಕಾಂಗ್ರೆಸ್ ಮುಖಂಡರ ಕುರಿತು ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. |