ರಾಜ್ಯದ ವಿವಿಧೆಡೆ ನಡೆದ ಚರ್ಚ್ ಮೇಲಿನ ದಾಳಿ ಪ್ರಕರಣದಿಂದಾಗಿ ಕರ್ನಾಟಕ ವಿಶ್ವದಾದ್ಯಂತ ಅಪಖ್ಯಾತಿಗೆ ಒಳಗಾಗಬೇಕಾಯಿತು ಎಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಆರ್. ವಿ ದೇಶಪಾಂಡೆ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಗರದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತರು ಹಾಗೂ ಶೋಷಿತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸದ ಸಚಿವರು ವರ್ಗಾವಣೆ, ಭ್ರಷ್ಟಾಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ಜನ ವಿರೋಧಿ ಸರ್ಕಾರವನ್ನು ತೊಲಗಿಸಲು ಕಾರ್ಯಕರ್ತರು ಮುಂದೆ ಬರಬೇಕೆಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಸ್ತುವಾರಿ ಸಚಿವ ಪೃಥ್ವಿರಾಜ್ ಚೌವಾಣ್, ಕೋಮುವಾದಿ ಶಕ್ತಿಗಳನ್ನು ಬಗ್ಗುಬಡಿಯಲು ಜಾತ್ಯತೀತ ಪಕ್ಷಗಳು ಒಗ್ಗೂಡಬೇಕೆಂದು ಹೇಳಿದರು. ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಸಿದ್ದು ಗೈರು:
ಮುಂದಿನ ಉಪಚುನಾವಣೆಗೆ ಹೊಸ ನಾಯಕತ್ವದಲ್ಲಿ ರಣಕಹಳೆ ಮೊಳಗಿಸುವ ವೇದಿಕೆಯಾದ ಈ ಸಮಾವೇಶದಲ್ಲಿ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪ್ರವಾಸಕ್ಕೆ ತೆರಳಿರುವುದಾಗಿ ಹೇಳಿಕೆ ನೀಡಿದ್ದರೂ, ಪಕ್ಷದ ನಾಯಕರ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. |