ಐತಿಹಾಸಿಕ ದಸರಾ ಉತ್ಸವದ ಆಕರ್ಷಕ ಜಂಬೂ ಸವಾರಿ ಗುರುವಾರ ನಡೆಯಲಿದ್ದು, ಇದೀಗ ಆ ಗಳಿಗೆಗಾಗಿ ಸಾಂಸ್ಕೃತಿಕ ನಗರಿಯಲ್ಲಿ ಕ್ಷಣಗಣನೆ ಆರಂಭವಾಗಿದೆ.
ಜಿಲ್ಲಾಡಳಿತ ಭರದಿಂದ ದಸರಾ ಸಿದ್ಧತೆಗಳನ್ನು ಕೈಗೊಂಡಿದ್ದು,ಗುರುವಾರದಂದು ಮಧ್ಯಾಹ್ಯ 12.39ಕ್ಕೆ ಸರಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಜಂಬೂ ಸವಾರಿ ಸಾಗುವ ಅರಮನೆ ಮುಂಭಾಗದ ರಸ್ತೆ, ಕೆ.ಆರ್. ವೃತ್ತ, ಬನ್ನಿಮಂಟಪ ಸೇರುವ ಸಯ್ಯಾಜಿರಾವ್ ರಸ್ತೆಗಳಲ್ಲಿ ಭರದಿಂದ ಸಿದ್ದತಾ ಕಾರ್ಯಗಳು ನಡೆಯುತ್ತಿದೆ.
ಇದೇ ಸಂದರ್ಭದಲ್ಲಿ ಸಂಸ್ಕೃತಿ, ಸಂಪ್ರದಾಯಗಳ ಕುರಿತು ತಿಳಿಸುವ ಶಬ್ದ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಬೋಫೋರ್ಸ್ ಫಿರಂಗಿ, ಟ್ಯಾಂಕರ್ ಗಳು ಸೇರಿದಂತೆ ಹಲವು ಪ್ರಕಾರಗಳು ಪ್ರದರ್ಶನಗೊಳ್ಳಲಿದೆ.
ಅಭೂತ ಪೂರ್ವ ಭದ್ರತೆ:
ಭಯೋತ್ಪಾದಕರ ಕರಿ ನೆರಳು ಆವರಿಸಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಿರುವ ಪೊಲೀಸ್ ಇಲಾಖೆ, ಎಲ್ಲಾ ಕಡೆಗಳಲ್ಲಿಯೂ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಎರಡು ದಿನ ಮುಂಚಿತವಾಗಿಯೇ ಮೈಸೂರು ನಗರದ ಪ್ರಮುಖ ತಾಣಗಳಲ್ಲಿ ಕೂಲಂಕಷ ಪರಿಶೀಲನೆ ನಡೆಸಿರುವ ಹೈದರಾಬಾದ್ ಮತ್ತು ದೆಹಲಿಗೆ ರಾಜ್ಯಗಳ ಪರಿಣಿತ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ತಂಡ ಮುನ್ನೆಚ್ಚರಿಕೆ ಅಂಗವಾಗಿ ಎಲ್ಲೆಡೆ ಸರ್ಪಗಾವಲು ನಡೆಸುತ್ತಿವೆ.
ವಿಶ್ವ ವಿಖ್ಯಾತ ಅರಮನೆಗಂತೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಅರಮನೆಯ ಸುತ್ತಲೂ ಶಸ್ತ್ರಧಾರಿ ಪೊಲೀಸರು ಕಾವಲು ಇಡಲಾಗಿದ್ದು, ಎಲ್ಲಾ ಕಡೆಗಳಲ್ಲಿಯೂ ರಹಸ್ಯ ಕ್ಯಾಮೆರಾಗಳನ್ನು ಜೋಡಿಸಲಾಗಿದೆ. |