ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಅವರು ಮಂಗಳವಾರ ಸಂಜೆ ಗುಲ್ಬರ್ಗಾದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಇಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಟೇಲ್ ಅವರು ಹೃದಯಾಘಾತಕ್ಕೆ ಒಳಗಾಗಿದ್ದು, ಅವರನ್ನು ಕೂಡಲೇ ಗುಲ್ಬರ್ಗಾದ ನಿಷ್ಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಅಸು ನೀಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.ಈ ಮೊದಲು ಮೆರಾಜುದ್ದೀನ್ ಅವರು ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದಾರಲ್ಲದೆ, ಬೆಂಗಳೂರಿನ ವೋಕಾರ್ಡ್ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿ ಕೂಡ ಮಾಡಿಸಿಕೊಂಡಿದ್ದರು.ಅವರು ಬೀದರ್ ಜಿಲ್ಲೆಯ ಹುಮ್ನಾಬಾದ್ ಕ್ಷೇತ್ರದಿಂದ ಜೆಡಿಎಸ್ ಮೂಲಕ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿದ್ದ ಅವರು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.ಗಣ್ಯರ ಸಂತಾಪ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಮೆರಾಜುದ್ದೀನ್ ಪಟೇಲ್ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪಕ್ಷದ ವರಿಷ್ಠ,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದು, ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪ್ರಮುಖ ಗಣ್ಯರು ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. |
ಸಂಬಂಧಿತ ಮಾಹಿತಿ ಹುಡುಕಿ |
|