ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬಲಗೈ ಬಂಟ ಎಂದೇ ನಾಮಾಂಕಿತರಾಗಿದ್ದವರು ಮೆರಾಜುದ್ದೀನ್ ಪಟೇಲ್.
1958ರ ಮಾರ್ಚ್ 9ರಂದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹುಚ್ಕನಹಳ್ಳಿಯ ಮುಸಲ್ಮಾನ ಕುಟುಂಬದಲ್ಲಿ ಜನಿಸಿದ ಮೆರಾಜುದ್ದೀನ್, ಬಿಎಸ್ ಸಿ ಎಜಿ ಪದವಿ ಪಡೆದು ರಾಜಕೀಯ ರಂಗ ಪ್ರವೇಶಿಸಿದರು.
ಜನತಾಪಕ್ಷ, ಜನತಾಪರಿವಾರದ ಮೂಲಕವೇ ರಾಜಕೀಯ ಪ್ರವೇಶ ಮಾಡಿ ಅವುಗಳೊಂದಿಗೆ ಬೆರೆತು ಸೋಲು ಗೆಲುವುಗಳನ್ನು ಸಮಾನಾಗಿ ಕಾಣುತ್ತಿದ್ದ ಅವರು, 2006ರ ಅಕ್ಟೋಬರ್ ನಿಂದ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿದ್ದರು.
1985ರಲ್ಲಿ ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಗೊಂಡ ಅವರು, ದೇವೇಗೌಡರ ಸಂಪುಟದಲ್ಲಿ ಸಚಿವರಾಗಿದ್ದರು.
ಆ ಬಳಿಕ 2004ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪಶು ಸಂಗೋಪನೆ ಸಚಿವರಾಗಿದ್ದರು. ಆದರೆ, ಈ ಸಂದರ್ಭದಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಮುಂದಾದ ಕುಮಾರಸ್ವಾಮಿ ಜೊತೆ ಹಲವು ನಾಯಕರು ಹೋದರೂ, ಮೆರಾಜುದ್ದೀನ್ ಮಾತ್ರ ಗೌಡರಿಗೆ ಹೆಗಲು ಕೊಟ್ಟು ಪಕ್ಷದ ಬಲವರ್ಧನೆಗೆ ಶ್ರಮಿಸಿದರು.
ಸೌಮ್ಯ ಸ್ವಭಾವದವರಾಗಿದ್ದರೂ ನಿಷ್ಠುರ ಮಾತುಗಳಿಗೆ ಹೆಸರಾದವರು ಮೆರಾಜುದ್ದೀನ್. ವಸ್ತುಸ್ಥಿತಿ ಮುಂದಿಡುತ್ತಲೇ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಗೌಡರನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದೀಗ ಜೆಡಿಎಸ್ ನಲ್ಲಿ ಮಹತ್ವದ ಕೊಂಡಿ ಕಳಚಿದೆ. ಇದು ಜೆಡಿಎಸ್ ದೊಡ್ಡ ಆಘಾತವಾಗಿದೆ. |