ವಿಧಾನಸಭೆಯ ಎಂಟು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಸಮಾಜವಾದಿ ಪಕ್ಷ ನಿರ್ಧರಿಸಿದೆ. ಜಾತ್ಯತೀತ ಪಕ್ಷವೊಂದರ ಅಭ್ಯರ್ಥಿಗೆ ಸಮಾಜವಾದಿ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಸ್.ಬಂಗಾರಪ್ಪ ಹೇಳಿದ್ದಾರೆ.
ಬಿಜೆಪಿ ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸಾಮಾನ್ಯ ಅಭ್ಯರ್ಥಿ ನಿಲ್ಲಿಸಿದರೂ ಪಕ್ಷ ಬೆಂಬಲ ನೀಡಲಿದೆ ಎಂದ ಅವರು, ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಬಂಗಾರಪ್ಪ,ಅವರು ಬಿಜೆಪಿ ಸ್ವಾಮೀಜಿ. ಅವರಿಗೆ ಆಸ್ತಿ ಹಾಗೂ ಹಣದ ದಾಹವಿದೆ. ಇದೇ ಕಾರಣಕ್ಕಾಗಿ ಮತ್ತಷ್ಟು ದೇವಸ್ಥಾನಗಳನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು. ಗೋಕರ್ಣ ದೇವಸ್ಥಾನ ಹಸ್ತಾಂತರವನ್ನು ಸರ್ಕಾರ ರದ್ದುಪಡಿಸಬೇಕು ಎಂದು ಒತ್ತಾಯಿಸಿದ ಅವರು, ಹಸ್ತಾಂತರ ವಿರೋಧಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ಸೊರಬ ತಾಲೂಕಿನಲ್ಲಿ ದಂಡಾವತಿ ನದಿಗೆ ಆಣೆಕಟ್ಟು ನಿರ್ಮಿಸುವ ಯೋಜನೆಯನ್ನು ವಿರೋಧಿಸಿದ ಬಂಗಾರಪ್ಪ ಈ ಯೋಜನೆ ಕಾರ್ಯಸಾಧುವಲ್ಲ ಎಂದಿದ್ದಾರೆ. |