ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದ ಮಾಜಿ ನಿರ್ದೇಶಕ ಬಿ.ಸಿ.ಮೈಲಾರಪ್ಪ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಈಗಿನ ನಿರ್ದೇಶಕ ಮಹೇಂದ್ರ ಅವರು ಈ ಪ್ರಕರಣ ದಾಖಲಿಸಿದ್ದಾರೆ. ಮೈಲಾರಪ್ಪ ಅವರು ನಿರ್ದೇಶಕರಾಗಿದ್ದಾಗ ಅರ್ಹತೆ ಇಲ್ಲದವರನ್ನು ವಿದೇಶಕ್ಕೆ ಪ್ರವಾಸ ಕರೆದುಕೊಂಡು ಹೋಗಿ ವಿವಿ ನಿಧಿಯನ್ನು ಅನಾವಶ್ಯಕವಾಗಿ ಪೋಲು ಮಾಡಿದ್ದಾರೆ. ಅಲ್ಲದೇ ಚೆಕ್‌ವೊಂದಕ್ಕೆ ನಕಲಿ ಸಹಿ ಮಾಡಿದ್ದಾರೆ ಎಂದು ಮಹೇಂದ್ರ ಆರೋಪಿಸಿದ್ದಾರೆ.
ಈ ಘಟನೆಯಲ್ಲಿ ಕುಲಸಚಿವರ ನಿರ್ದೇಶನದಂತೆ ತಾವು ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಲಾರಪ್ಪ, ಇದು ದುರುದ್ದೇಶದಿಂದ ಮಾಡಲಾಗಿದ್ದು, ನನ್ನ ವಜಾಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನನ್ನ ಪರವಾಗಿ ತೀರ್ಪು ಬಂದ ತಕ್ಷಣ ಈ ರೀತಿ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. |