ಚಿಕ್ಕಮಗಳೂರಿನ ದತ್ತಪೀಠ ವಿವಾದ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ಶುಕ್ರವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿದ್ದ ಅನ್ನಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ದತ್ತಪೀಠ ಕುರಿತಂತೆ ಉಂಟಾಗಿರುವ ಗೊಂದಲಗಳಿಗೆ ನಿವಾರಣೆ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಪುಟ ಸಭೆ ಚರ್ಚೆ ನಡೆಸಲಿದೆ. ಆ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ತಾವು ಮುಂದಿನ ವರ್ಷ ದತ್ತಮಾಲೆ ಧರಿಸಿಯೇ ಬಾಬಾ ಬುಡನ್‌ಗಿರಿಗೆ ಬರುವುದಾಗಿ ಚುನಾವಣೆಗೂ ಮುನ್ನ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ಕೈಗೊಳ್ಳುವ ತೀರ್ಮಾನ ಮಹತ್ವ ಪಡೆಯಲಿದೆ.
ವಿದೇಶಿ ಪ್ರವಾಸಿಗರ ವಿರುದ್ಧ ತನಿಖೆ:ರಾಜ್ಯದಲ್ಲಿ ಅಕ್ರಮವಾಗಿ ತಳವೂರಿರುವ ಬಾಂಗ್ಲಾದೇಶಿಯರನ್ನು ಪತ್ತೆ ಹಚ್ಚಿ ತನಿಖೆ ನಡೆಸಲು ನಿರ್ಧರಿಸಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪೊಲೀಸ್ ಇಲಾಖೆಗೆ ಈ ಸಂಬಂಧ ಸೂಚನೆ ನೀಡಿದ್ದು,ಅಕ್ರಮ ವಲಸಿಗರ ಮೇಲೆ ಹದ್ದಿನ ಕಣ್ಣಿಡಲಾಗುವುದು ಎಂದು ಹೇಳಿದರು. |