ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಯಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಮೀಸಲಾತಿ ಒದಗಿಸದೇ ಇರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಅಂಗೀಕರಿಸಿರುವ ಹೈಕೋರ್ಟ್, ಕೆಪಿಎಸ್‌ಸಿ ಮತ್ತು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ಜಾತಿವಾರು ಮೀಸಲಾತಿಯಲ್ಲೇ ಅಂಗವಿಕಲರ ಕಲ್ಯಾಣ ಆಯುಕ್ತರು ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದ್ದು, ಆದ್ದರಿಂದ ಪ್ರತ್ಯೇಕ ಮೀಸಲಾತಿ ನೀಡುವಂತೆ ಆದೇಶಿಸಬೇಕು ಎಂದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯ ಭೀಮಪ್ಪ ಮತ್ತು ಅಂಜುತಾಯಿ ಪೋಲ್ ಎಂಬುವರು ಅರ್ಜಿಯಲ್ಲಿ ಕೋರಿದ್ದಾರೆ.ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1,239 ಎಫ್‌ಡಿಎ ಮತ್ತು 1,687 ಎಸ್‌ಡಿಎ ಹುದ್ದೆಗಳ ನೇಮಕಾತಿಗೆ 2007ರ ಡಿಸೆಂಬರ್ 5ರಂದು ಅರ್ಜಿ ಆಹ್ವಾನಿಸಿತ್ತು. ಬಳಿಕ 2008ರ ಆಗಸ್ಟ್ 18ರಂದು 695 ಎಫ್‌ಡಿಎ ಮತ್ತು 127 ಎಸ್‌ಡಿಎ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು.ನಂತರ 2008ರ ಸೆಪ್ಟೆಂಬರ್ 1ರಂದು ಪ್ರಕಟಿಸಿದ ಅಧಿಸೂಚನೆಯಲ್ಲಿ 627 ಎಫ್‌ಡಿಎ ಮತ್ತು 96 ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ ಮೂರು ಅಧಿಸೂಚನೆಗಳನ್ನು ಒಗ್ಗೂಡಿಸಿ ಪರೀಕ್ಷೆ ನಡೆಸಲಾಗಿದೆ. ಇದು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾದ ನಡವಳಿಕೆ. ಈ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲ ಜಗದೀಶ್ ಶಾಸ್ತ್ರಿ ವಾದಿಸಿದ್ದಾರೆ. |
|