ಚಿಕ್ಕಮಗಳೂರಿನ ವಿವಾದಿತ ಬಾಬಾಬುಡನ್‌ಗಿರಿಯಲ್ಲಿ ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ದತ್ತಗುಹೆ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
ದತ್ತಪೀಠದ ಗುಹೆ ಕುಸಿದಿದ್ದು, ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ನಾರಾಯಣ ಸ್ವಾಮಿ ಶುಕ್ರವಾರ ತಿಳಿಸಿದ್ದಾರೆ.
ಗುಹೆ ದುರಸ್ತಿಯಾಗದ ಹೊರತು ದತ್ತ ಪಾದುಕೆಗಳನ್ನು ಬೇರೆಡೆಗೆ ಪುನರ್ ಪ್ರತಿಷ್ಠಾಪನೆ ಸಮಂಜಸವಲ್ಲ. ಈ ನಿಟ್ಟಿನಲ್ಲಿ ವಿವಾದಿತ ಪ್ರದೇಶದ ಹೊರ ಭಾಗದಲ್ಲಿ ದತ್ತ ವಿಗ್ರಹ ಇಡಲು ಅವಕಾಶ ನೀಡಲಾಗುವುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಮಳೆಯಿಂದ ದತ್ತ ಪೀಠದ ಗುಹೆ ಕುಸಿದಿದೆ. ಈ ನಿಟ್ಟಿನಲ್ಲಿ ದತ್ತಪೀಠಕ್ಕೆ ನಿಷೇಧ ಹೇರಲಾಗಿದ್ದು, ಪ್ರವೇಶ ದ್ವಾರದಿಂದ ಪೀಠದ ಆವರಣ ಹಾಗೂ ಅದರ ಸುತ್ತಮುತ್ತಲು ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಗುಹೆ ದುರಸ್ತಿ ಕಾರ್ಯ ಮುಗಿದು ಕನಿಷ್ಠ 4 ತಿಂಗಳಾದರೂ ಆ ಭಾಗದಲ್ಲಿ ಸಾರ್ವಜನಿಕರ ಓಡಾಟ ಇರಬಾರದು, ಅಲ್ಲಿವರೆಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಡಿಸೆಂಬರ್ ನಲ್ಲಿ ನಡೆಯಲಿರುವ ದತ್ತ ಜಯಂತಿ ಸಂದರ್ಭದಲ್ಲಿ ಪ್ರವೇಶ ನಿಷೇಧ ಎಂಬ ಇಂಗಿತವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಮೂಲಕ ದತ್ತಪೀಠದ ಆವರಣದೊಳಗೆ ದತ್ತ ಪಾದುಕೆ ಪ್ರತಿಷ್ಠಾಪನೆ ಮಾಡಿ, ಪೂಜೆಗೆ ಅವಕಾಶ ಸಿಗುವ ಹಿಂದೂ ಸಂಘಟನೆಗಳ ಬೇಡಿಕೆಗೆ ಜಿಲ್ಲಾಡಳಿತ ತಣ್ಣೀರು ಎರಚಿದೆ. |