ರಾಮಚಂದ್ರಪುರ ಮಠಕ್ಕೆ ಗೋಕರ್ಣ ದೇವಾಲಯವನ್ನು ಹಸ್ತಾಂತರ ಮಾಡಿರುವ ಬಗ್ಗೆ ನಡೆದ ವಿವಾದದ ಬೆನ್ನಲ್ಲೆ ಇದೀಗ ರಾಮಚಂದ್ರ ಮಠ ಬಿಜೆಪಿ ಮಠವಾಗಿ ಪರಿವರ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಟೀಕಿಸಿದ್ದಾರೆ.
ನಗರದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಠ ಮಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ, ಅಭಿವೃದ್ಧಿಯತ್ತ ಚಿಂತನೆ ನಡೆಸುತ್ತಿಲ್ಲ ಎಂದು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಪನ್ಮೂಲ ಕ್ರೋಢಿಕರಣದಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದ ಅವರು, ರಾಜ್ಯದ ಖಜಾನೆ ಖಾಲಿಯಾಗಿದ್ದರೂ, ಮುಖ್ಯಮಂತ್ರಿಗಳು ಹಲವು ಯೋಜನೆಗಳನ್ನು ಪ್ರಕಟಿಸುತ್ತಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯ ದಿವಾಳಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ದಂಡಾವತಿ ಯೋಜನೆ ಕುರಿತು ಪ್ರತಿಕ್ರಿಯಿಸಿದ ಬಂಗಾರಪ್ಪ, ಈ ಯೋಜನೆಯನ್ನು ಮುಂದುವರಿಸಲು ಸರ್ಕಾರ ಪ್ರಯತ್ನಿಸಿದರೆ ಸಿಂಗೂರ್ ಮಾದರಿಯಲ್ಲಿ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. |