ಬೆಂಗಳೂರು ನಗರ ಸೇರಿದಂತೆ ಉತ್ತರ ಭಾಗದಲ್ಲಿ ಮಾರಕಾಸ್ತ್ರ ಹಿಡಿದು ದರೋಡೆ ನಡೆಸುತ್ತಿದ್ದ 8ಮಂದಿ ಡಕಾಯಿತರ ತಂಡವೊಂದನ್ನು ಬಂಧಿಸುವಲ್ಲಿ ರಾಮಮೂರ್ತಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಕಾಯಿತರ ತಂಡ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 16 ಲಕ್ಷ ರೂ.ಬೆಲೆಯ 30ಚಿನ್ನದ ಸರ, 15 ಉಂಗುರ, ಎರಡು ಕಾರು, ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆಂದು ಪೊಲೀಸ್ ಕಮಿಷನರ್ ಶಂಕರ್ ಬಿದರಿ ತಿಳಿಸಿದ್ದಾರೆ.
ಕುರುಬರಹಳ್ಳಿಯ ರಮೇಶ್ ಆಲಿಯಾಸ್ ಪುಟ್ಟ ರಮೇಶ್ (21), ಬಾಗಲ್ ಕುಂಟೆಯ ಪ್ರಜ್ವಲ್ ಆಲಿಯಾಸ್ ಸತ್ಯವೇಲು (18), ಪೀಣ್ಯ ಎರಡನೇ ಹಂತದ ಶಿವಾ ಆಲಿಯಾಸ್ ಸೇರ್ವಾಶಿವಾ(19), ರಾಜಗೋಪಾಲನಗರದ ರಘು ಆಲಿಯಾಸ್ ಅತ್ತಿ(19), ಮಂಜು ಆಲಿಯಾಸ್ ಮೆಂಟಲ್ ಮಂಜ (ಎಲ್‌ಎಲ್‌ಬಿ ವಿದ್ಯಾರ್ಥಿ), ಪೀಣ್ಯ ಅಶೋಕ್ (18), ಸುಂಕದಕಟ್ಟೆಯ ವಿಶ್ವ(19) , ಕುರುಬರಹಳ್ಳಿಯ ಮಣಿಕಂಠ ಎಂಬವರನ್ನು ಬಂಧಿಸಿ, ಅವರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಬಂಧಿತರ ವಿರುದ್ಧ ವೈಯಾಲಿಕಾವಲ್, ಜಾಲಹಳ್ಳಿ, ಮಹಾಲಕ್ಷ್ಮಿ ಲೇಔಟ್, ಹೆಬ್ಬಾಳ, ಬಸವೇಶ್ವರ ನಗರ, ರಾಜಗೋಪಾಲನಗರ, ಆರ್‌ಎಂಸಿ ಯಾರ್ಡ್ ಸೇರಿದಂತೆ ಇನ್ನೂ ಕೆಲವು ಪೊಲೀಸ್ ಠಾಣೆಗಳಲ್ಲಿ ಕೇಸುಗಳನ್ನು ದಾಖಲಿಸಲಾಗಿದೆ. |