ನಕಲಿ ಮತದಾನವನ್ನು ಹಾಗೂ ನಕಲಿ ಮಾತದಾರರನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮುಂದಿನ ಲೋಕಸಭಾ ಚುನಾವಣೆಗಳಿಗೆ ಭಾವಚಿತ್ರ ಹೊಂದಿದ ಮತದಾರರ ಪಟ್ಟಿಯನ್ನು ಬಳಸಲು ಉದ್ದೇಶಿಸಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಫೋಟೋ ಉಳ್ಳ ಮತದಾರರ ಪಟ್ಟಿಯನ್ನು ಬಳಸಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಮೊದಲು ಕೇರಳ, ನಂತರ ತಮಿಳುನಾಡು ಹಾಗೂ ಉತ್ತರದ ರಾಜ್ಯಗಳಿಗೆ ಜಾರಿಗೊಳಿಸಲಾಗುತ್ತದೆ ಎಂದು ಇಲ್ಲಿನ ಚುನಾವಣಾ ಆಯೋಗ ತಿಳಿಸಿದೆ.
ಈ ನಿಟ್ಟಿನಲ್ಲಿ ದೇಶಾದ್ಯಂತ ಚುನಾವಣಾ ಫೋಟೋ ಗುರುತಿನ ಚೀಟಿ ವಿತರಿಸುವ ಕಾರ್ಯವನ್ನು ಆಯೋಗ ತೀವ್ರ ಗೊಳಿಸಿದ್ದು, ಜನವರಿ ಹೊತ್ತಿಗೆ ಎಲ್ಲಾ ರಾಜ್ಯಗಳಲ್ಲಿಯೂ ಭಾವಚಿತ್ರಗಳುಳ್ಳ ಮತದಾರರ ಪಟ್ಟಿಯನ್ನು ಹೊಂದಿರುತ್ತಾರೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ನವೆಂಬರ್ ಮೊದಲ ವಾರದ ಒಳಗಾಗಿ ಪ್ರಾಥಮಿಕ ಮತದಾರರ ಪಟ್ಟಿಗೆ ಅಧಿಸೂಚನೆ ಹೊರಡಿಸುವಂತೆ ಎಲ್ಲಾ ರಾಜ್ಯಗಳ ಚುನಾವಣಾಧಿಕಾರಿಗಳಿಗೆ ಆಯೋಗ ಹೇಳುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿನ 2 ಕೋಟಿ 65 ಲಕ್ಷ ಮತದಾರರಲ್ಲಿ 1 ಕೋಟಿ 30 ಲಕ್ಷ ಮತದಾರರು ಇನ್ನೂ ಚುನಾವಣಾ ಫೋಟೋ ಐಡೆಂಟಿಟಿ ಕಾರ್ಡ್ ಗಳನ್ನು ಪಡೆದಿಲ್ಲ. ಮುಂದಿನ 45 ದಿನಗಳಲ್ಲಿ ಕನಿಷ್ಠ ಪಕ್ಷ 1 ಕೋಟಿ ಮತದಾರರಿಗಾದರೂ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
|