ಸಚಿವ ಆನಂದ್ ಆಸ್ನೋಟಿಕರ್ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪ ಇದೀಗ ರಾಜಕೀಯ ತಿಕ್ಕಾಟಕ್ಕೆ ಎಡೆ ಮಾಡಿಕೊಟ್ಟಿದೆ.
ಆರೋಪವನ್ನು ತೀವ್ರವಾಗಿ ತಳ್ಳಿ ಹಾಕಿರುವ ಕೇಂದ್ರದ ಮಾಜಿ ಸಚಿವ ವಿ. ದನಂಜಯ ಕುಮಾರ್, ಈ ಪ್ರಕರಣದ ಕುರಿತು ಹೇಳಿಕೆ ನೀಡುವ ಬದಲು ಕೆಪಿಸಿಸಿ ಅಧ್ಯಕ್ಷರು ಆಸ್ನೋಟಿಕರ್ ವಿರುದ್ಧ ಕಾರವಾರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಆಸ್ನೋಟಿಕರ್ ಅವರನ್ನು ಎದುರಿಸಲು ಭಯಪಡುತ್ತಿರುವ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ದಿಲೀಪ್ ನಾಯಕ್ ಕೊಲೆ ಪ್ರಕರಣದಲ್ಲಿ ಅನಾವಶ್ಯಕವಾಗಿ ಆನಂದ್ ಆಸ್ನೋಟಿಕರ್ ಹೆಸರು ಪ್ರಸ್ತಾಪಿಸುವ ಮೂಲಕ ಪ್ರಕರಣದ ಹಾದಿ ತಪ್ಪಿಸುವ ಯತ್ನ ಇದಾಗಿದೆ ಎಂದು ತಿಳಿಸಿದ ಅವರು, ಈ ಪ್ರಕರಣದ ಪ್ರಮುಖ ಆರೋಪಿ ರಾಜುಶೆಟ್ಟಿ ಮಂಪರು ಪರೀಕ್ಷೆ ಸಂದರ್ಭದಲ್ಲಿ ದೇಶಪಾಂಡೆ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. |