ಬಡ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ನೆರವಾಗಬೇಕಿದ್ದ ದೊಡ್ಡ ಮಠಗಳೆಲ್ಲ ಹಣ ಸುಲಿಗೆ ಮಾಡುವ ಕೇಂದ್ರಗಳಾಗಿವೆ ಎಂದು ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಆರೋಪಿಸಿದರು.
ಸ್ವಾಮಿ ವಿವೇಕಾನಂದ ವಿಚಾರ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಬಡ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದರೆ ಅಕ್ಷರ ದಾಸೋಹ,ಅನ್ನ ದಾಸೋಹ ಹೆಸರಲ್ಲಿ ಸರ್ಕಾರದ ನೆರವವನ್ನು ಪಡೆದುಕೊಳ್ಳುತ್ತ ತಮ್ಮ ಜನಾಂಗದವರಿಗೇ ನೆರವಾಗುತ್ತ,ಇತರರಿಂದ ಲಕ್ಷಾಂತರ ರೂಪಾಯಿ ಡೊನೇಷನ್ ವಸೂಲು ಮಾಡುತ್ತ ಬೀಗುತ್ತಿವೆ ಎಂದು ಕಟುವಾಗಿ ಟೀಕಿಸಿದರು.
ಕೇವಲ ಸಾವಿರಾರು ಮಕ್ಕಳಿಗೆ ಅನ್ನ ಹಾಕಿದರೆ ಸಾಲದು,ಬಡವರಿಗೆ ನೆರವಾಗುತ್ತ ನಮ್ಮ ಕಲೆ,ಸಂಸ್ಕೃತಿ,ದೇಸಿಯತೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವತ್ತ ಅವರನ್ನು ಬೆಳಸಬೇಕು.
ಅದು ನಮ್ಮ ಅಗತ್ಯ ಎಂದರು. ದೇಸಿ ಸಂಸ್ಕೃತಿ ಇಂದು ಯಾರಿಗೂ ಬೇಕಿಲ್ಲ. ಎಲ್ಲೆಡೆ ಭ್ರಷ್ಟಾಚಾರ,ಅರಾಜಕತೆ ತಾಂಡವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಧರ್ಮದ ಕಡೆಗೆ ಜನರ ಮನಸ್ಸನ್ನು ತಿರುಗಿಸುವ ಕೆಲಸ ನಡೆಯಬೇಕು. ಆದರೆ ನಮ್ಮ ಮಠಗಳು ಇಂತಹ ಕೆಲಸ ಮಾಡುವಲ್ಲಿ ಸೋತಿವೆ ಎಂದು ದೂರಿದರು. |