ಚುನಾವಣಾ ನಾಮಪತ್ರ ಸಲ್ಲಿಸುವಾಗ ಸರಿಯಾದ ಆಸ್ತಿ ವಿವರ ಒದಗಿಸಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಮೀನುಗಾರಿಕಾ ಮತ್ತು ವಿಜ್ಞಾನ- ತಂತ್ರಜ್ಞಾನ ಸಚಿವ ಆನಂದ ಆಸ್ನೋಟಿಕರ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, 1980ರ ದಶಕದಲ್ಲಿ ಮುಂಡಗೇರಿಯ ಏಳು ಎಕರೆ ಭೂಮಿಯನ್ನು ತಮ್ಮ ತಂದೆ ವಸಂತ ಆಸ್ನೋಟಿಕರ್ ಮತ್ತು ಇತರರು ಸೇರಿ ಕಾರ್ಖಾನೆ ಆರಂಭಿಸುವ ಉದ್ದೇಶದಿಂದ ಜಮೀನು ನೋಂದಣಿ ಮಾಡಿಸಿದ್ದರು.
ಆದರೆ ಕೆಲವು ತೊಂದರೆಗಳು ಎದುರಾದ ಕಾರಣ ಕಾರ್ಖಾನೆ ಸಕಾಲದಲ್ಲಿ ಆರಂಭವಾಗುವುದು ಸಾಧ್ಯವಾಗಲಿಲ್ಲ. ತಂದೆಯವರ ನಿಧನದ ನಂತರ ನನಗೆ ಸಹಕಾರ ಇಲಾಖೆಯಿಂದ ನೋಟಿಸ್ ಬಂದಿತು. 2001ರಲ್ಲಿ ಬಾಕಿ ಹಣ ಪಾವತಿ ಮಾಡಿದಾಗ ಜಮೀನು ನನ್ನ ಸುಪರ್ದಿಗೆ ಬಂದಿತು.
ಆದರೆ ಆನಂತರ ಸಹಕಾರ ಸಂಘದ ಮಾಜಿ ಸದಸ್ಯರಾದ ಪ್ರಭಾಕರ ರಾಣೆ ಮತ್ತಿತರರು ಈ ವಿಷಯದಲ್ಲಿ ಸಹಕಾರ ಸಂಘಕ್ಕೆ ದೂರಿದಾಗ ವಿವಾದ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಬಂತು. ಜಮೀನಿನ ಕುರಿತು ವಿವಾದವಿದ್ದುದರಿಂದಲೇ ತಾವು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುವಾಗ ಈ ಜಮೀನಿನ ವಿವರ ನಮೂದಿಸಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. |